ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇಡು ತಿರಿಸಿಕೊಂಡಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ ಟೇಬಲ್‌ನಲ್ಲಿ ಆಗ್ರಸ್ಥಾನಕ್ಕೇರಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾನುವಾರದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಣಿಸಿದೆ. ಭುವನೇಶ್ವರ್ ಕುಮಾರ್ ಅವರ ಅದ್ಭುತ ಬೌಲಿಂಗ್ ಮತ್ತು ಕೃನಾಲ್ ಪಾಂಡ್ಯ ಅವರ ಆಲ್‌ರೌಂಡರ್ ಪ್ರದರ್ಶನದಿಂದ ಬೆಂಗಳೂರು ಗೆಲುವಿನ ನಗೆ ಬೀರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 162 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 18.3 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು165 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ ಬೆಂಗಳೂರು ತಂಡ ಪ್ಲೇಆಫ್ ತಲುಪುವ ಸನಿಹದಲ್ಲಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ನೀಡಿದ 163 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಆರ್‌ಸಿಬಿ ಕಳಪೆ ಆರಂಭವನ್ನು ಪಡೆಯಿತು. ಫಿಲ್ ಸಾಲ್ಟ್ ಬದಲಿಗೆ ಆರ್‌ಸಿಬಿ ಪರ ಐಪಿಎಲ್‌ಗೆ ಪ್ರವೇಶಿಸಿದ ಜೇಕಬ್ ಬೆಥೆಲ್ 6 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರೆ, ದೇವದತ್ತ್ ಪಡಿಕ್ಕಲ್ ಖಾತೆ ತೆರೆಯದೆ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ನಾಯಕ ರಜತ್ ಪಾಟಿದಾರ್ ದುರದೃಷ್ಟಕರ ರನೌಟ್‌ಗೆ ಬಲಿಯಾದರು. ಈ ಹಂತದಲ್ಲಿ ಆರ್‌ಸಿಬಿ ತಂಡದ ಮೂವರು ಬ್ಯಾಟರ್ಸ್ 26 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು.
ಸಂಕಷ್ಟಕ್ಕೆ ಸಿಲುಕಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ನೆರವಾದರು. ಈ ಜೋಡಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಮೂಲಕ ಆರ್‌ಸಿಬಿ ತಂಡವನ್ನು ಗೆಲುವಿನ ಕಡೆ ಮುನ್ನಡೆಸಿದರು. ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ನಾಲ್ಕನೇ ವಿಕೆಟ್‌ಗೆ 119 ರನ್‌ಗಳ ಜೊತೆಯಾಟ ನೀಡುವ ಮೂಲಕ ಆರ್‌ಸಿಬಿಯ ಗೆಲುವಿಗೆ ಅಡಿಪಾಯ ಹಾಕಿದರು.
ಆರ್‌ಸಿಬಿ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಟಿಮ್ ಡೇವಿಡ್ (19 ರನ್) ಸತತ ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 4 ಬೌಂಡರಿಗಳಿಂದ 51 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಕೃನಾಲ್ ಪಾಂಡ್ಯ ಕೊನೆವರೆಗೆ ಕ್ರೀಸ್‌ನಲ್ಲಿ ನಿಂತು ಗೆಲುವು ತಂದುಕೊಟ್ಟರು. ಅವರು 47 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 73 ರನ್ ಬಾರಿಸಿದರು.
ಟಾಸ್ ಸೋತು ಮೊದಲು ಆಡಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಡೆಲ್ಲಿ ತಂಡವು 33 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಉತ್ತಮ ಫಾರ್ಮ್‌ನಲ್ಲಿರುವ ಅಭಿಷೇಕ್ ಪೂರೆಲ್ 11 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು. ಇದಾದ ನಂತರ, ಕರುಣ್ ನಾಯರ್ ವೈಯಕ್ತಿಕ ಸ್ಕೋರ್ 4 ರನ್‌ಗಳಿಗೆ ಔಟಾದರು. ಫಾಫ್ ಡು ಪ್ಲೆಸಿಸ್ ಮತ್ತು ಕೆಎಲ್ ರಾಹುಲ್ ಜವಾಬ್ದಾರಿ ವಹಿಸಿಕೊಂಡು ತಂಡದ ಸ್ಕೋರ್ ಅನ್ನು 50 ದಾಟಿಸಿದರು.
ಫಾಪ್ ಡು ಪ್ಲೆಸಿಸ್ ಸೆಟ್ ಆಗಿದ್ದರೂ, ಅವರ ಬ್ಯಾಟ್‌ನಿಂದ ರನ್‌ಗಳು ವೇಗವಾಗಿ ಬರುತ್ತಿರಲಿಲ್ಲ. ಅವರು ಒತ್ತಡದಲ್ಲಿ ಕಾಣುತ್ತಿದ್ದರು. ಇದರ ಲಾಭವನ್ನು ಕೃನಾಲ್ ಪಾಂಡ್ಯ ಅವರು ಪಡೆದುಕೊಂಡರು. ಫಾಫ್ ಡು ಪ್ಲೆಸಿಸ್ ಅವರು ವಿರಾಟ್ ಕೊಹ್ಲಿ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ನಡೆದರು. ಈ ಹಂತದಲ್ಲಿ ಡೆಲ್ಲಿ ತಂಡ 73 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳಬ್ಬು ಕಳೆದುಕೊಂಡಿತು. ತಂಡದ ಭರವಸೆ ಈ ಸಂದರ್ಭದಲ್ಲಿ ಕೆಎಲ್ ರಾಹುಲ್ ಮೇಲೆ ನಿಂತಿತು.
ಕೆಎಲ್ ರಾಹುಲ್ ಒಂದು ತುದಿಯನ್ನು ಹಿಡಿದು ಸ್ಕೋರ್ ಬೋರ್ಡ್ ಅನ್ನು ಮುಂದಕ್ಕೆ ಸರಿಸಲು ಪ್ರಯತ್ನಿಸುತ್ತಲೇ ಇದ್ದರು. ಆರ್‍ಸಿಬಿ ಬೌಲರ್ಸ್ ಡೆಲ್ಲಿ ತಂಡಕ್ಕೆ ಬಿಗ್ ಸ್ಕೋರ್ ಗಳಿಸಲು ಬಿಡಲಿಲ್ಲ. ವೇಗಿ ಭುವನೇಶ್ವರ್ ಕುಮಾರ್ 17ನೇ ಓವರ್‍ನಲ್ಲಿ ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದರು. ರಾಹುಲ್ 39 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 41 ರನ್ ಗಳಿಸಿ ಔಟಾದರು. ಅಕ್ಸರ್ ಪಟೇಲ್ 15 ರನ್ ಮತ್ತು ಇಂಪ್ಯಾಕ್ಟ್ ಪ್ಲೇಯರ್ ಅಶುತೋಷ್ ಶರ್ಮಾ 2 ಔಟಾದರು.
ಈ ಹಂತದಲ್ಲಿ ಡೆಲ್ಲಿ ತಂಡ 150 ರನ್‌ಗಳ ಗಡಿ ದಾಟಲು ಸಾಧ್ಯವಿಲ್ಲ ಎಂದು ಭಾವಿಸಲಾಗಿತ್ತು. ಆದರೆ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ವಿಪ್ರಜ್ ನಿಗಮ್ ಹಾಗೆ ಆಗಲು ಬಿಡಲಿಲ್ಲ. ಒಟ್ಟಾಗಿ ಕೊನೆಯ ಓವರ್‍ಗಳಲ್ಲಿ ಅವರು ವೇಗವಾಗಿ ರನ್ ಗಳಿಸಿದರು. ಯಶ್ ದಯಾಳ್ ಅವರ ಸ್ಪೆಲ್‌ನ ಕೊನೆಯ ಓವರ್‍ನಲ್ಲಿ, ಡೆಲ್ಲಿ ಕ್ಯಾಟಪಿಲ್ ತಂಡವು 19 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಅದರ ಸಹಾಯದಿಂದ ತಂಡದ ಸ್ಕೋರ್ 150 ದಾಟಿತು.
ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿಕೆಟ್‌ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ದುಷ್ಮಂತ ಚಮೀರಾ, ಕುಲದೀಪ್ ಯಾದವ್, ಮುಖೇಶ್ ಕುಮಾರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್‌ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಳ್.