ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಶನಿವಾರ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದೆ. ಹೀಗಾಗಿ ಎರಡು ತಂಡಗಳು ಕೂಡ ಪಂದ್ಯಕ್ಕೆ ಸಿದ್ಧತೆಯನ್ನು ನಡೆಸುತ್ತಿದೆ. ಈ ಅಭ್ಯಾಸದ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡದ ಖಾಯಂ ನಾಯಕ, ಗಾಯದಿಂದಾಗಿ ಹೊರಗುಳಿದಿರುವ ರಿಷಭ್ ಪಂತ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದು ಆಟಗಾರರಿಗೆ ಬಲ ತುಂಬಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಮೈದಾನದಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದರೆ ರಿಷಭ್ ಪಂತ್ ಬಂಡರಿ ಲೈನ್ ಬಳಿ ಅಭ್ಯಾಸವನ್ನು ವೀಕ್ಷಿಸುತ್ತಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ರಿಷಭ್ ಪಂತ್ ಇದಕ್ಕೂ ಮುನ್ನ ಗುಜರಾತ್ ಟೈಟನ್ಸ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು.

ರಿಷಭ್ ಪಂತ್ 2022 ಡಿಸೆಂಬರ್ ತಿಂಗಳಿನ ಅಂತ್ಯದಲ್ಲಿ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದರು. ತೀವ್ರ ಗಾಯಕ್ಕೆ ತುತ್ತಾಗಿದ್ದ ಪಂತ್ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇದೀಗ ಚೇತರಿಸಿಕೊಳ್ಳುತ್ತಿರು ಅವರಿಗೆ ಇನ್ನೂ ದೀರ್ಘ ಕಾಲದ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಮೈದಾನದಲ್ಲಿ ಪಂತ್ ಆಡಲು ಮಷ್ಟು ಸಮಯಾವಕಾಶದ ಅಗತ್ಯವಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಂಪೂರ್ಣವಾಗಿ ವಿಫಲವಾಗಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿಯೂ ಸೋಲು ಕಂಡಿದ್ದು ಹೀನಾಯ ಸ್ಥಿತಿಯಲ್ಲಿದೆ. ಮೊದಲ ಗೆಲುವಿನ ಹುಡುಕಾಟದಲ್ಲಿರುವ ವಾರ್ನರ್ ಪಡೆ ಆರ್‌ಸಿಬಿ ವಿರುದ್ಧ ಅಬ್ಬರಿಸುವ ವಿಶ್ವಾಸದಲ್ಲಿದ್ದು ಈ ಪಂದ್ಯ ಈಗ ಕುತೂಹಲ ಮೂಡಿಸಿದ.
ರಿಷಭ್ ಪಂತ್ ಅಲಭ್ಯತೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡವನ್ನು ಆಸ್ಟ್ರೇಲಿಯಾದ ಅನುಭವಿ ಆಟಗಾರ ಡೇವಿಡ್ ವಾರ್ನರ್ ಮುನ್ನಡೆಸುತ್ತಿದ್ದಾರೆ. ಐಪಿಎಲ್‌ನಲ್ಲಿ ನಾಯಕನಾಗಿ ಅಪಾರ ಅನುಭವ ಹೊಂದಿರುವ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಗಮನಸೆಳೆಯುವಲ್ಲಿ ವಿಫಲವಾಗಿದ್ದಾರೆ. ವೈಯಕ್ತಿಕವಾಗಿ ವಾರ್ನರ್ ಬ್ಯಾಟ್‌ನಿಂದ ಉತ್ತಮವಾಗಿ ರನ್ ಹರಿದು ಬಂದಿದ್ದರೂ ಅವರ ಸ್ಟ್ರೈಕ್‌ರೇಟ್ ಕಳವಳಕಾರಿಯಾಗಿದೆ. ಅಲ್ಲದೆ ಪೃಥ್ವಿ ಶಾ ಅವರಂತಾ ಅನೇಕ ಆಟಗಾರರು ಲಯವನ್ನು ಕಂಡುಕೊಳ್ಳಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಯಶ್ ಧುಲ್, ಫಿಲ್ ಸಾಲ್ಟ್, ಸರ್ಫರಾಜ್ ಖಾನ್, ಮನೀಶ್ ಪಾಂಡೆ, ರಿಲೀ ರೋಸೌವ್, ರಿಪಾಲ್ ಪಟೇಲ್, ರೋವ್ಮನ್ ಪೊವೆಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅಮನ್ ಖಾನ್, ವಿಕ್ಕಿ ಒಸ್ತ್ವಾಲ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಅಭಿಷೇಕ್ ಪೊರೆಲ್