RCB vs DC: ಕೆಎಲ್ ರಾಹುಲ್ vs ಆರ್‌ಸಿಬಿ, ಅಭಿಮಾನಿಗಳ ಬೆಂಬಲ ಯಾರಿಗೆ?
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳ ನಡುವಣ ಶನಿವಾರ ಐಪಿಎಲ್ ಬಿಗ್ ಫೈಟ್ ನಡೆಯಲಿದೆ. ಈ ವೇಳೆ ಅಭಿಮಾನಿಗಳಿಗೆ ಡಬಲ್ ಧಮಾಕಾ ಕಾದಿದೆ. ಕಾರಣ ಆರ್‌ಸಿಬಿ ತವರು ತಂಡವಾಗಿದ್ದು, ಡೆಲ್ಲಿ ತಂಡದಲ್ಲಿ ತವರಿನ ಹುಡುಗ ಕೆಎಲ್ ರಾಹುಲ್ ಕಣಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಸ್ಟಾರ್ ಆಟಗಾರರ ನಡುವಣ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಆರ್‌ಸಿಬಿ ತಂಡ ಈ ಆವೃತ್ತಿ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಅಲ್ಲದೆ ತವರಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಮತ್ತೊಂದು ಗೆಲುವಿನ ಹುಡುಕಾಟದಲ್ಲಿದೆ. ಆರ್‌ಸಿಬಿ ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಆಡಿದ 4 ಪಂದ್ಯಗಳಲ್ಲಿ 2 ಜಯ ದಾಖಲಿಸಿದ್ದು, 4 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಉಭಯ ತಂಡದಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ.ಹೀಗಾಗಿ ಪಂದ್ಯ ಎಲ್ಲರ ಚಿತ್ತ ನೆಟ್ಟಿದೆ.

ಆರ್‌ಸಿಬಿ ಹಾಗೂ ಡಿಸಿ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ 33 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 20 ಪಂದ್ಯಗಳಲ್ಲಿ ಆರ್‌ಸಿಬಿ ಜಯ ಸಾಧಿಸಿದ್ದು, ಡೆಲ್ಲಿ 12 ಪಂದ್ಯಗಳಲ್ಲಿ ಜಯದ ನಗೆ ಬೀರಿದೆ. ಈ ಬಾರಿ ಯಾರ ಕೈ ಮೇಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ವಿರಾಟ್ ಆಕರ್ಷಣೆ
ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅಲ್ಲದೆ ಆರೆಂಜ್ ಕ್ಯಾಪ್ ಹೊಂದಿರುವ ಆಟಗಾರ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ರನ್ ಸಾಧಕರ ಪಟ್ಟಿಯಲ್ಲಿ ಮುಂಚೂಣಿಯನ್ನು ಕಾಯ್ದುಕೊಳ್ಳುವ ಆಸೆಯನ್ನು ಹೊಂದಿದ್ದಾರೆ. ಇನ್ನು ಆರಂಭಿಕ ಆಟಗಾರ ಫಿಲ್ ಸಾಲ್ಟ್ ತಮ್ಮ ಬಿರುಸಿನ ಆಟದಿಂದ ಎದುರಾಳಿ ಬೌಲರ್‌ಗಳನ್ನು ಕಾಡಬೇಕಿದೆ. ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಆಡುವ ಸಾಧ್ಯತೆ ಇದೆ. ಇನ್ನು ಮಿಡ್ಲ್ ಓವರ್‌ಗಳಲ್ಲಿ ರಜತ್ ಪಾಟಿದಾರ್ ಸೊಗಸಾಗಿ ಬ್ಯಾಟ್ ಮಾಡಬಹುದು.
ಫಿನಿಷರ್ ರೂಪದಲ್ಲಿ ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್ ತಮ್ಮ ಆರ್ಭಟವನ್ನು ನಡೆಸುವ ಅನಿವಾರ್ಯತೆ ಇದೆ. ಅಂದಾಗ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ವೇಗದ ಬೌಲಿಂಗ್ ನೊಗವನ್ನು ಜೋಶ್ ಹ್ಯಾಜಲ್‌ವುಡ್ ಹೊರಲಿದ್ದು, ಇವರು ರನ್‌ಗಳಿಗೆ ಕಡಿವಾಣ ಹಾಕುವ ಕ್ಷಮತೆ ಹೊಂದಿದ್ದಾರೆ. ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಇನ್ನೊಂದು ತುದಿಯಲ್ಲಿ ಎದುರಾಳಿಗಳನ್ನು ಕಾಡಬಲ್ಲರು. ಕಳೆದ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿ 4 ವಿಕೆಟ್ ಪಡೆದಿದ್ದ ರಸಿಕ್ ಸಲಾಂ ದರ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆಲ್‌ರೌಂಡರ್ ಕೃನಾಲ್ ಪಾಂಡ್ಯ ಸ್ಪಿನ್ ಬೌಲಿಂಗ್‌ನಲ್ಲಿ ಮೋಡಿ ಮಾಡುತ್ತಿದ್ದಾರೆ. ಇವರಿಗೆ ಸುಯಶ್ ಶರ್ಮಾ ಉತ್ತಮ ಸಾಥ್ ನೀಡಬೇಕಿದೆ. ಅಂದಾಗ ಮತ್ತೊಂದು ಗೆಲುವಿನ ಕನಸು ನನಸಾಗುತ್ತದೆ.

ಹ್ಯಾಟ್ರಿಕ್ ಸೋಲಿನ ಭೀತಿ
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಆವೃತ್ತಿಯ ಆರಂಭವನ್ನು ಭರ್ಜರಿಯಾಗಿ ಆರಂಭಿಸಿತ್ತು. ಆದರೆ, ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈಸ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿದೆ. ಈಗ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಹ್ಯಾಟ್ರಿಕ್ ಸೋಲಿನ ಭೀತಿ ಎದುರಿಸುತ್ತಿದೆ. ಡೆಲ್ಲಿ ತಂಡದಲ್ಲಿ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಇದ್ದಾರೆ. ಇವರು ಆಡಿ ಬೆಳದ ಅಂಗಳದಲ್ಲಿ ತವರು ತಂಡದ ವಿರುದ್ಧ ಆರ್ಭಟ ನಡೆಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಪತುಮ್ ನಿಸ್ಸಂಕಾ, ಸಮೀರ್ ರಿಜ್ವಿ, ಅಕ್ಷರ್ ಪಟೇಲ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್ ತಂಡದ ಪರ ಸ್ಥಿರ ಪ್ರದರ್ಶನ ನೀಡಬೇಕಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಅಕಿಬ್ ನಬಿ, ಮುಕೇಶ್ ಕುಮಾರ್, ಟಿ ನಟರಾಜನ್ ಅವರು ಬಿಗುವಿನ ದಾಳಿ ನಡೆಸಿ ತಂಡಕ್ಕೆ ಅಧಾರವಾಗಬಲ್ಲರು. ಇವರಿಗೆ ಲುಗಿ ಎನ್‌ಗಿಡಿ ತಮ್ಮ ಸ್ಲೋವರ್ ಒನ್ ಎಸೆತಗಳ ಮೂಲಕ ಉತ್ತಮ ಸಾಥ್ ನೀಡಬೇಕಿದೆ. ಇನ್ನು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಕುಲ್‌ದೀಪ್ ಯಾದವ್ ಸ್ಪಿನ್ ಮೋಡಿ ನಡೆಸಿದಲ್ಲಿ ಗೆಲುವಿನ ನಗೆ ಬೀರಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications