ನವಿ ಮುಂಬೈ: ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ರೋಚಕತೆ ಹೆಚ್ಚಿಸಿದೆ. ಈ ಲೀಗ್‌ನಲ್ಲಿ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದು ಅಭಿಮಾನಿಗಳನ್ನು ರಂಜಿಸಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 32 ರನ್‌ಗಳಿಂದ ಗುಜರಾತ್ ತಂಡವನ್ನು ಮಣಿಸಿ, ಲೀಗ್‌ನಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದೆ. ಶನಿವಾರ ಆರ್‌ಸಿಬಿ ಲೀಗ್ ಹಂತದ ನಾಲ್ಕನೇ ಪಂದ್ಯ ಆಡಲಿದೆ. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿ ಆಗಲಿವೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಜೆಮಿಮಾ ರೊಡ್ರಿಗಸ್ ಮುನ್ನಡೆಸುತ್ತಿದ್ದು, ಆರ್‌ಸಿಬಿ ತಂಡದ ಚುಕ್ಕಾಣಿ ಸ್ಮೃತಿ ಮಂಧಾನ ಹಿಡಿದಿದ್ದಾರೆ. ಇವರಿಬ್ಬರೂ ಆಪ್ತ ಸ್ನೇಹಿತರಾಗಿದ್ದು, ಈಗ ಮೈದಾನದಲ್ಲಿ ಎದುರುಬದರಾಗಲಿದ್ದಾರೆ. ಡೆಲ್ಲಿ ಸಹ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದು, ಎರಡನೇ ಗೆಲುವಿನ ನಗೆ ಬೀರುವ ಕನಸು ಕಾಣುತ್ತಿದೆ. ಇನ್ನು ಆರ್‌ಸಿಬಿ ತನ್ನ ಜಯದ ಓಟವನ್ನು ಮುಂದುವರೆಸುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಈ ಪಂದ್ಯ ನವಿ ಮುಂಬೈನಲ್ಲಿ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯವಾಗಿರಲಿದೆ. ಡಿವೈ ಪಾಟೀಲ್ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ನೆರವು ನೀಡುತ್ತದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಮಾಡುವುದನ್ನು ನೋಡಬಹುದಾಗಿದೆ.

ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಆರಂಭಿಕರಾಗಿ ಗ್ರೇಸ್ ಹ್ಯಾರಿಸ್ ಹಾಗೂ ಸ್ಮೃತಿ ಮಂಧಾನ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಬೇಕಿದೆ. ಈ ಜೋಡಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಉಭಯ ಆಟಗಾರ್ತಿಯರು ದೊಡ್ಡ ಇನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾಗಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್, ಗೌತಮಿ ನಾಯಕ್ ತಮ್ಮ ಜವಾಬ್ದಾರಿ ಅರಿತು ಆಡಬೇಕಿದೆ.
ಆಲ್‌ರೌಂಡರ್ ರಾಧಾ ಯಾದವ್ ಗುಜರಾತ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡಿಸಿ ಮಿಂಚಿದ್ದರು. ಡೆಲ್ಲಿ ವಿರುದ್ಧವೂ ಇದೇ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ನಾಡಿನ್ ಡಿ ಕ್ಲರ್ಕ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಟವಾಡಬೇಕಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಲಾರೆನ್ ಬೆಲ್, ಲಿನ್ಸೆ ಸ್ಮಿತ್ ಬಿಗುವಿನ ದಾಳಿ ನಡೆಸಬೇಕಿದೆ. ಕನ್ನಡತಿ ಶ್ರೇಯಾಂಕ ಪಾಟೀಲ್ ಗುಜರಾತ್ ವಿರುದ್ಧ ನೀಡಿದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಆರ್‌ಸಿಬಿ ಸಂಭಾವ್ಯ ತಂಡ: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ (ನಾಯಕಿ), ಡಿ ಹೇಮಲತಾ, ಗೌತಮಿ ನಾಯಕ್, ರಾಧಾ ಯಾದವ್, ರಿಚಾ ಘೋಷ್ (ವಿಕೆಟ್ ಕೀಪರ್), ನಾಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ಲಿನ್ಸೆ ಸ್ಮಿತ್/ಜಾರ್ಜಿಯಾ ವೋಲ್ ಮತ್ತು ಲಾರೆನ್ ಬೆಲ್.
ಡೆಲ್ಲಿ ತಂಡದಲ್ಲೂ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಶಫಾಲಿ ವರ್ಮಾ, ಲಿಜೆಲ್ ಲೀ ಜೋಡಿ ಅಬ್ಬರದ ಬ್ಯಾಟಿಂಗ್ ನಡೆಸಬೇಕಿದೆ. ಜೆಮಿಮಾ ರೊಡ್ರಿಗಸ್ ಉತ್ತಮ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಬೇಕಿದೆ. ಆಲ್‌ರೌಂಡರ್ ಚಿನೆಲ್ ಹೆನ್ರಿ, ಸ್ನೇಹ್ ರಾಣಾ ಜೋಡಿ ಜವಾಬ್ದಾರಿಯುತ ಆಟವನ್ನು ಆಡಬೇಕಿದೆ. ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಜಯದಲ್ಲಿ ಮಿಂಚಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಶಫಾಲಿ ವರ್ಮಾ, ಲಿಜೆಲ್ ಲೀ (ವಿಕೆಟ್ ಕೀಪರ್), ಲಾರಾ ವೊಲ್ವಾರ್ಡ್, ಜೆಮಿಮಾ ರೋಡ್ರಿಗಸ್ (ನಾಯಕಿ), ಮರಿಜಾನ್ನೆ ಕಪ್, ನಿಕಿ ಪ್ರಸಾದ್, ಚಿನೆಲ್ ಹೆನ್ರಿ, ಸ್ನೇಹ್ ರಾಣಾ, ಮಿನ್ನು ಮಣಿ, ಎನ್ ಶ್ರೀ ಚರಣಿ ಮತ್ತು ನಂದಿನಿ ಶರ್ಮಾ.
ಆರ್‌ಸಿಬಿ ಹಾಗೂ ಡೆಲ್ಲಿ ನಡುವಣ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಈ ಪಂದ್ಯವನ್ನು ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
ಆರ್‌ಸಿಬಿ ಹಾಗೂ ಡೆಲ್ಲಿ ನಡುವಣ ಪಂದ್ಯ 7.30ಕ್ಕೆ ನಡೆಯಲಿದೆ. ಪಂದ್ಯಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.