WPL 2026: ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ RCB: ಕನ್ನಡತಿ ಶ್ರೇಯಾಂಕ ಪಾಟೀಲ್‌ಗೆ 5 ವಿಕೆಟ್
ನವಿ ಮುಂಬೈ: ಆಲ್ ರೌಂಡರ್ ರಾಧಾ ಯಾದವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರ ಬಿಗುವಿನ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 32 ರನ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು. ಈ ಮೂಲಕ ಆರ್‌ಸಿಬಿ ಪ್ರಸಕ್ತ ಲೀಗ್‌ನಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದೆ. ಈ ಮೂಲಕ ಸ್ಮೃತಿ ಪಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ.
ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಗುಜರಾತ್ ಜೈಂಟ್ಸ್ ತಂಡದ ಆರಂಭ ಕಳಪೆಯಾಗಿತ್ತು. ಗುಜರಾತ್ ತಂಡದ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ (8) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಸೊಗಸಾದ ಬ್ಯಾಟಿಂಗ್ ನಡೆಸುತ್ತಿದ್ದ ಬೆತ್ ಮೂನಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 27 ರನ್ ಸಿಡಿಸಿ ಔಟ್ ಆದರು. ನಾಯಕಿ ಆಶ್ಲೀ ಗಾರ್ಡ್ನರ್ (3) ಆರ್‌ಸಿಬಿ ಬೌಲರ್‌ಗಳ ತಂತ್ರವನ್ನು ಅರಿಯುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದ ಆಟಗಾರ್ತಿ ಕನಿಕಾ ಅಹುಜಾ 2 ಬೌಂಡರಿ ಸೇರಿದಂತೆ 16 ರನ್ ಸಿಡಿಸಿ ಶ್ರೇಯಾಂಕ ಪಾಟೀಲ್‌ಗೆ ವಿಕೆಟ್ ಒಪ್ಪಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಜಾರ್ಜಿಯಾ ವೇರ್‌ಹ್ಯಾಮ್ (13) ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಭಾರ್ತಿ ಫುಲ್ಮಾಲಿ ಅವರ ಆಟ 39 ರನ್‌ಗಳಿಗೆ ಕೊನೆಯಾಯಿತು. ಇವರ ಕ್ಲಾಸ್ ಇನಿಂಗ್ಸ್‌ನಲ್ಲಿ 3 ಬೌಂಡರಿ, 3 ಸಿಕ್ಸರ್ ಒಳಗೊಂಡಿವೆ. ಕಾಶವಿ ಗೌತಮ್ 18 ರನ್‌ಗಳಿಗೆ ಆಟ ಮುಗಿಸಿದರು.ಅಂತಿಮವಾಗಿ ಗುಜರಾತ್ ಜೈಂಟ್ಸ್ ತಂಡ 150 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನ ಮೂಲಕ ಆರ್‌ಸಿಬಿ ಆಡಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.
ಶ್ರೇಯಾಂಕ ಮಿಂಚು
ಕರ್ನಾಟಕದ ಸ್ಟಾರ್ ಆಟಗಾರ್ತಿ ಶ್ರೇಯಾಂಕ ಪಾಟೀಲ್ ತಮ್ಮ ಸ್ಪಿನ್ ಮೋಡಿಯ ಪ್ರದರ್ಶನ ನೀಡಿದರು. ಇವರು 3.5 ಓವರ್ ಬೌಲಿಂಗ್ ನಡೆಸಿ 23 ರನ್ ನೀಡಿ 5 ಅಮೂಲ್ಯ ವಿಕೆಟ್ ಪಡೆದರು.
ರಾಧಾ ಯಾದವ್ ಅಬ್ಬರ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಗ್ರೇಸ್ ಹ್ಯಾರೀಸ್ ಜೋಡಿ ಮೊದಲ ವಿಕೆಟ್‌ಗೆ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಗ್ರೇಸ್ ಹ್ಯಾರಿಸ್ ಮೊದಲ ಓವರ್‌ನಲ್ಲಿ 23 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಗ್ರೇಸ್ ಹ್ಯಾರೀಸ್ 4 ಬೌಂಡರಿ ನೆರವಿನಿಂದ 17 ರನ್ ಸಿಡಿಸಿ ಔಟ್ ಆದರು. ಸ್ಮೃತಿ ಮಂಧಾನ 5, ದಯಾಳನ್ ಹೇಮಲತಾ 4, ಗೌತಮಿ ನಾಯಕ್ 9 ರನ್ ಸಿಡಿಸಿದರು.

43 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಲ್‌ರೌಂಡರ್ ರಾಧಾ ಯಾಧವ್ ಹಾಗೂ ವಿಕೆಟ್ ಕೀಪರ್ ರಿಚಾ ಘೋಷ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 66 ಎಸೆತಗಳಲ್ಲಿ 105 ರನ್ ಸೇರಿಸಿತು. ರಿಚಾ ಘೋಷ್ 44 ರನ್ ಬಾರಿಸಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಾಧಾ ಯಾದವ್ 66 ರನ್ ಸಿಡಿಸಿದರು. ಇವರ ಈ ಅಮೋಘ ಇನಿಂಗ್ಸ್‌ನಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳು ಸೇರಿವೆ. ಭರವಸೆಯ ಆಟಗಾರ್ತಿ ನಾಡಿನ್ ಡಿ ಕ್ಲರ್ಕ್ 26 ರನ್ ಸಿಡಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 182 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications