ಶುಕ್ರವಾರ, ಮಾರ್ಚ್ 29ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳ ಮುಖಾಮುಖಿಯಾಗಲು ಸಜ್ಜಾಗಿವೆ.
ಇದೇ ವೇಳೆ ಕಳೆದ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ತಂಡದ ರಿಂಕು ಸಿಂಗ್ ಬ್ಯಾಟಿಂಗ್ ಅನ್ನು ಯಶ್ ದಯಾಳ್ ತಮ್ಮ ವೃತ್ತಿಜೀವನದಲ್ಲಿ ಮರೆಯುವುದಿಲ್ಲ. ಅದು ಎಡಗೈ ವೇಗದ ಬೌಲರ್ ಯಶ್ ದಯಾಳ್ನ ಮಾನಸಿಕ ಕುಸಿತಕ್ಕೆ ಕಳುಹಿಸಿದ ಆಟವಾಗಿತ್ತು. ನಂತರ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು.

ಐಪಿಎಲ್ 2023ರಲ್ಲಿ, ಯಶ್ ದಯಾಳ್ ಗುಜರಾತ್ ಟೈಟನ್ಸ್ ತಂಡದ ಪರ ಆಡಿದ್ದರು. ಅಂತಿಮವಾಗಿ ಕಳೆದ ಮಿನಿ ಹರಾಜಿಗೂ ಮುನ್ನ ಅವರನ್ನು ಬಿಡುಗಡೆ ಮಾಡಿದರು.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಿಂಕು ಸಿಂಗ್ ಅವರು ಸೋಲಿನ ದವಡೆಯಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಲು, ಯಶ್ ದಯಾಳ್ ಅವರ ಕೊನೆಯ ಓವರ್ ಬೌಲಿಂಗ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸಿದರು.
ಕೆಕೆಆರ್ ತಂಡಕ್ಕೆ ಕೊನೆಯ 5 ಎಸೆತಗಳಲ್ಲಿ 28 ರನ್‌ಗಳ ಅಗತ್ಯವಿದ್ದಾಗ, ರಿಂಕು ಸಿಂಗ್ ತಮ್ಮ ತಂಡ ಗೆಲ್ಲುವವರೆಗೂ ಯಶ್ವ ದಯಾಳ್ ಬೌಲಿಂಗ್‌ನಲ್ಲಿ ಸತತ ಐದು ಸಿಕ್ಸರ್ ಹೊಡೆದರು.

ಕಳೆದ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ನಿತೀಶ್ ರಾಣಾ ಮುನ್ನಡೆಸಿದ್ದರು. ಗೆಲುವಿನ ನಂತರ, ರಿಂಕು ಸಿಂಗ್‌ರನ್ನು ಅಪ್ಪಿಕೊಳ್ಳಲು ಮೈದಾನದಲ್ಲಿ ಓಡಿ ಬಂದಿದ್ದರು.
ಮತ್ತೊಂದೆಡೆ ಬೌಲರ್ ಯಶ್ ದಯಾಳ್ ಕಂಗಾಲಾಗಿ ತಲೆ ಮೇಲೆ ಕೈ ಹೊತ್ತಿದ್ದರು. ಯಶ್ ದಯಾಳ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಹೀನಾಯವಾಗಿ ಟ್ರೋಲ್ ಮಾಡಲಾಗಿತ್ತು ಮತ್ತು ಅದು ಅವರನ್ನು ಆಘಾತಕ್ಕೆ ತಳ್ಳಿತು.
"ಗುಜರಾತ್ ಟೈಟನ್ಸ್ vs ಕೆಕೆಆರ್ ಪಂದ್ಯದ ನಂತರ, ಸಾಮಾಜಿಕ ಮಾಧ್ಯಮವನ್ನು ನೋಡದಂತೆ ನನಗೆ ಹೇಳಲಾಯಿತು. ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ನನಗೆ ನೋವಾಗಿದೆ, ನಾನು ಯಾವ ಹಿನ್ನೆಲೆಯಿಂದ ಬಂದಿದ್ದೇನೆ ಮತ್ತು ಹೇಗೆ ಕ್ರಿಕೆಟ್ ಆಡುತ್ತೇನೆ ಎಂದು ಅವರು ತಿಳಿದುಕೊಳ್ಳದಿದ್ದಾಗ ಹೆಚ್ಚು ನೋವುಂಟು ಮಾಡುತ್ತದೆ. ಪಂದ್ಯದ ನಂತರ ನನಗೆ ಅನಾರೋಗ್ಯ ಕಾಡುತ್ತಿದೆ," ಎಂದು ಯಶ್ ದಯಾಳ್ ಈ ಹಿಂದೆ ಹೇಳಿದ್ದರು.

ಇದೀಗ ಮತ್ತೊಮ್ಮೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಯಶ್ ದಯಾಳ್ ಅವರು ರಿಂಕು ಸಿಂಗ್ ಅವರಿಗೆ ಮತ್ತೊಮ್ಮೆ ಬೌಲಿಂಗ್ ಮಾಡಲು ಸಜ್ಜಾಗಿದ್ದಾರೆ. ಈ ಬಾರಿ ಕಳೆದ ರಿಂಕು ಸಿಂಗ್ ಅವರ ವಿಕೆಟ್ ಪಡೆದು ಜಿದ್ದು ತೀರಿಸಿಕೊಳ್ಳುತ್ತಾರಾ ಅಥವಾ ಮತ್ತೆ ರನ್ ಸೋರಿಕೆ ಮಾಡುತ್ತಾರಾ ಕಾದು ನೋಡಬೇಕಿದೆ.
ಗುಜರಾತ್ ಟೈಟನ್ಸ್ ಬಿಡುಗಡೆ ಮಾಡಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 5 ಕೋಟಿ ರೂಪಾಯಿಗೆ ಎಡಗೈ ವೇಗಿಯನ್ನು ಖರೀದಿಸಿತು.
ಒಟ್ಟಾರೆಯಾಗಿ ಸಂಪೂರ್ಣ ಹೊಸ ತಂಡದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 29ರಂದು ಆರ್‌ಸಿಬಿ ತಂಡವು ಕೆಕೆಆರ್ ತಂಡವನ್ನು ಎದುರಿಸುವಾಗ ರಿಂಕು ಸಿಂಗ್ ವಿಕೆಟ್ ಪಡೆಯಲು ಯಶ್ ದಯಾಳ್ ದೊಡ್ಡ ಅವಕಾಶವಿದೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಲ್‌ರೌಂಡರ್ ಸ್ಯಾಮ್ ಕುರ್ರಾನ್ ಅವರ ವಿಕೆಟ್ ಅನ್ನು ಯಶ್ ದಯಾಳ್ ಪಡೆದರು. ಆ ಪಂದ್ಯದಲ್ಲಿ 4 ಓವರ್‌ಗಳಲ್ಲಿ 23 ರನ್ ನೀಡಿ 1 ವಿಕೆಟ್‌ನ ಅಂಕಿಅಂಶಗಳೊಂದಿಗೆ ಮುಗಿಸಿದರು.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ತಂಡವು ಸಿಎಸ್‌ಕೆ ವಿರುದ್ಧ ಸೋಲು ಅನುಭವಿಸಿದಾಗ ಯಶ್ ದಯಾಳ್ ಪ್ರಭಾವಶಾಲಿಯಾಗಿದ್ದರು. ಚೆಪಾಕ್‌ನಲ್ಲಿ ಉತ್ತಮವಾಗಿ ಕಾಣಲು ಪ್ರಾರಂಭಿಸಿದ್ದ ರುತುರಾಜ್ ಗಾಯಕ್ವಾಡ್ ಅವರ ವಿಕೆಟ್ ಪಡೆದರು.
7.28ರ ಎಕಾನಮಿ ದರದಲ್ಲಿ ತಮ್ಮ ಹೆಸರಿಗೆ 2 ವಿಕೆಟ್‌ಗಳೊಂದಿಗೆ, ಯಶ್ ದಯಾಳ್ ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಬೌಲಿಂಗ್‌ನಲ್ಲಿ ಗಮನಾರ್ಹ ಸುಧಾರಣೆಯನ್ನು ತೋರಿಸಿದ್ದಾರೆ. ಕೆಕೆರ್ ಬ್ಯಾಟ್ಸ್‌ಮನ್‌ಗಳು, ವಿಶೇಷವಾಗಿ ರಿಂಕು ಸಿಂಗ್, ಆಂಡ್ರೆ ರಸೆಲ್, ಫಿಲ್ ಸಾಲ್ಟ್ ಮತ್ತು ರಮಣ್‌ದೀಪ್ ಸಿಂಗ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ.