RCB vs KKR: ರಾಯ್‌ಪುರದಲ್ಲಿ ವಿರಾಟ್ ಶತಕದ ವಿರಾವೇಶ; ಆರ್‌ಸಿಬಿಗೆ ಭರ್ಜರಿ ಜಯ
ರಾಯ್‌ಪುರ: ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಬಾರಿಸಿದ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 57ನೇ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಮಣಿಸಿ ಅಬ್ಬರಿಸಿತು. ಅಲ್ಲದೆ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಿತು.
ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಸಾಧಾರಣವಾಗಿತ್ತು. ಮೊದಲ ವಿಕೆಟ್‌ಗೆ ಆರಂಭಿಕ ಜಾಕೊಬ್ ಬೆಥೆಲ್ ಹಾಗೂ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಜೋಡಿ 3.2 ಓವರ್‌ಗಳಲ್ಲಿ 37 ರನ್ ಸೇರಿಸಿತು. ಈ ವೇಳೆ ಜಾಕೊಬ್ ಬೆಥೆಲ್ 15 ರನ್ ಬಾರಿಸಿದ್ದಾಗ ಕಾರ್ತಿಕ್ ತ್ಯಾಗಿಗೆ ವಿಕೆಟ್ ಒಪ್ಪಿಸಿದರು.

ಆರ್‌ಸಿಬಿ ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದಂತೆ ಬ್ಯಾಟ್ ಮಾಡಿ ಅಬ್ಬರಿಸಿತು. ಮೊದಲ ಆರು ಓವರ್‌ಗಳಲ್ಲಿ 66 ರನ್ ಸೇರಿಸಿತು. ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರಿಗೆ ಕರ್ನಾಟಕದ ದೇವದತ್ ಪಡಿಕ್ಕಲ್ ಜೋಡಿ ಕೆಕೆಆರ್ ಬೌಲರ್‌ಗಳನ್ನು ಕಾಡಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಕೆಕೆಆರ್ ಬೌಲರ್‌ಗಳು ವಿಫಲರಾದರು. ಈ ಜೊಡಿ 59 ಎಸೆತಗಳಲ್ಲಿ 92 ರನ್ ಸೇರಿಸಿತು. ಈ ಹಂತದಲ್ಲಿ 7 ಬೌಂಡರಿ ಸೇರಿದಂತೆ 39 ರನ್ ಬಾರಿಸಿದ್ದ ದೇವದತ್ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ನಾಯಕ ರಜತ್ ಪಾಟಿದಾರ್ (11) ಜೋಡಿ 17 ಎಸೆತಗಳಲ್ಲಿ 28 ರನ್ ಸೇರಿಸಿತು.
ವಿರಾಟ್ ಶತಕ
ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ರಾಯ್‌ಪುರದಲ್ಲಿ ಅಬ್ಬರಿಸಿದರು. ಇವರು ಆರಂಭದಲ್ಲಿ ಸಿಕ್ಕ ಜೀವದಾನದ ಲಾಭ ಪಡೆದರು. ಇವರು 60 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 105 ರನ್ ಬಾರಿಸಿದರು. ಅಲ್ಲದೆ ಐಪಿಎಲ್‌ನಲ್ಲಿ 9ನೇ ಶತಕ ಬಾರಿಸಿ ಮಿಂಚಿದರು. ಇವರ ಶತಕದ ನೆರವಿನಿಂದ ಆರ್‌ಸಿಬಿ 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 194 ರನ್ ಸೇರಿಸಿತು.
ಕೆಕೆಆರ್ ಪರ ಯುವ ವೇಗದ ಬೌಲರ್ ಕಾರ್ತಿಕ್ ತ್ಯಾಗಿ 32 ರನ್ ನೀಡಿ 3 ವಿಕೆಟ್ ಪಡೆದರು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡದ ಆರಂಭ ಸಾಧಾರಣವಾಗಿತ್ತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಫಿನ್ ಅಲೆನ್ ಆರ್‌ಸಿಬಿ ವಿರುದ್ಧ 19 ರನ್‌ಗಳಿಗೆ ಔಟ್ ಆದರು. ನಾಯಕ ಅಜಿಂಕ್ಯ ರಹಾನೆ 18 ರನ್ ಸಿಡಿಸಿದ್ದಾಗ ಜೋಶ್ ಹ್ಯಾಜಲ್‌ವುಡ್ ಅವರ ಬೌನ್ಸ್ ಎಸೆತವನ್ನು ತಪ್ಪಾಗಿ ಗ್ರಹಿಸಿ ಪುಲ್ ಮಾಡಲು ಹೋಗಿ ವಿಕೆಟ್ ಒಪ್ಪಿಸಿದರು.
ಅಂಗ್‌ಕ್ರಿಷ್ ರಘುವಂಶಿ
ಮೂರನೇ ವಿಕೆಟ್‌ಗೆ ಅಂಗ್‌ಕ್ರಿಷ್ ರಘುವಂಶಿ ಹಾಗೂ ಕ್ಯಾಮರೂನ್ ಗ್ರೀನ್ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಗ್ರೀನ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 32 ರನ್ ಬಾರಿಸಿ ಔಟ್ ಆದರು. 4ನೇ ವಿಕೆಟ್‌ಗೆ ಅಂಗ್‌ಕ್ರಿಷ್ ರಘುವಂಶಿ ಹಾಗೂ ಭರವಸೆಯ ಬ್ಯಾಟರ್ ರಿಂಕು ಸಿಂಗ್ ಜೋಡಿ ಸಮಯೋಚಿತ ಆಟ ನಡೆಸಿತು. ಈ ಜೋಡಿ 46 ಎಸೆತಗಳಲ್ಲಿ 76 ರನ್ ಸೇರಿಸಿತು. ಈ ವೇಳೆ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 71 ರನ್ ಸಿಡಿಸಿದ್ದ ಅಂಗ್‌ಕ್ರಿಷ್ ರಘುವಂಶಿ ಇಲ್ಲದ ರನ್ ಕದಿಯಲು ಹೋಗಿ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಔಟ್ ಆದರು. ರಿಂಕು ಸಿಂಗ್ ಅಜೇಯ 49 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 192 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications