ಐಪಿಎಲ್ 2025 ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಣಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ವರ್ಷಗಳ ಬಳಿಕ ವಾಂಖೆಡೆ ಸ್ಟೇಡಿಯಂನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಕೊನೆಯ ಓವರ್‌ನಲ್ಲಿ ಸ್ಪಿನ್ನರ್ ಕೃನಲ್ ಪಾಂಡ್ಯ ಅದ್ಭುತ ಬೌಲಿಂಗ್ ಪ್ರದರ್ಶಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ತವರಿನಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ.
ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 221 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮುಂಬೈ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 209 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಇದರೊಂದಿಗೆ ಆರ್‌ಸಿಬಿ 12 ರನ್‌ಗಳ ಅಮೋಘ ಜಯ ಕಂಡಿತು. ಮುಂಬೈ ತಂಡ ಆಡಿದ 5 ಪಂದ್ಯಗಳಲ್ಲಿ ಇದು ನಾಲ್ಕನೇ ಸೋಲು.

ಆರ್‌ಸಿಬಿ 2015 ರ ನಂತರ ಮೊದಲ ಮುಂಬೈ ಇಂಡಿಯನ್ಸ್ ತಂಡವನ್ನು ತವರಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಲಿಸಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚೆಪಾಕ್ ಅಂಗಳದಲ್ಲಿ ಸೋಲಿಸಿತ್ತು. 2008 ರ ನಂತರ ಚೆಪಾಕ್ ಸ್ಟೇಡಿಯಂನಲ್ಲಿ ಆರ್‌ಸಿಬಿ ಐತಿಹಾಸಿಕ ಗೆಲುವಿನ ನಗೆ ಬೀರಿತ್ತು. ಐಪಿಎಲ್ 2025 ರಲ್ಲಿ ಎರಡು ಚಾಂಪಿಯನ್ ತಂಡಗಳನ್ನು ಅವರ ತವರಿನಲ್ಲಿ ಸೋಲಿಸಿ ಆರ್‌ಸಿಬಿ ದಾಖಲೆ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ 222 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭವನ್ನು ಪಡೆಯಲಿಲ್ಲ. ರೋಹಿತ್ ಶರ್ಮಾ 9 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರೆ, ರಯಾನ್ ರಿಕಲ್ಟನ್ 10 ಎಸೆತಗಳಲ್ಲಿ 17 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಚೇತರಿಕೆ ಬ್ಯಾಟಿಂಗ್ ಮಾಡಿದ ವಿಲ್ ಜ್ಯಾಕ್ 18 ಎಸೆತಗಳಲ್ಲಿ 22 ರನ್ ಗಳಿಸಿದರು. ಆದರೆ ಸೂರ್ಯಕುಮಾರ್ ಯಾದವ್ ತಮ್ಮ ಶೈಲಿಯಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಅವರು ಕೇವಲ 26 ಎಸೆತಗಳಲ್ಲಿ 28 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಈ ಹಂತದಲ್ಲಿ ಮುಂಬೈ ಕೈಯಿಂದ ಪಂದ್ಯ ತಪ್ಪಿ ಹೋಗಿತ್ತು. ಆದರೆ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಮುಂಬೈ ಕಡೆಗೆ ತಿರುಗಿಸಿದರು. ತಿಲಕ್ ವರ್ಮಾ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‍ಗಳ ನೆರವಿನಿಂದ 56 ರನ್ ಗಳಿಸಿದರು. ಆದರೆ ತಿಲಕ್ ವರ್ಮಾ ಅವರ ಹೋರಾಟ ವ್ಯರ್ಥವಾಯಿತು.
ತಿಲಕ್ ವರ್ಮಾ ಜೊತೆಗೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಗೆಲುವಿಗೆ ಹೋರಾಟ ನಡೆಸಿದರು. ಅವರ ಕೇವಲ 15 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‍ಗಳ ಸಹಾಯದಿಂದ 45 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅವರು ಕ್ರೀಸ್‌ನಲ್ಲಿವರೆಗೂ ಮುಂಬೈ ತಂಡಕ್ಕೆ ಗೆಲುವಿನ ಭರವಸೆ ಇತ್ತು. ಆದರೆ 18ನೇ ಓವರ್‍ನಲ್ಲಿ ಜೋಶ್ ಹೇಜಲ್‌ವುಡ್ ಅವರು ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಹಾರ್ದಿಕ್ ಪಾಂಡ್ಯ ಔಟ್ ಆದ ಬಳಿಕ ಮುಂಬೈ ಸೋಲು ಖಚಿತವಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೃನಾಲ್ ಪಾಂಡ್ಯ 4 ವಿಕೆಟ್ ಪಡೆದು ಮಿಂಚಿದರು.
ಪಂದ್ಯ ಗೆಲ್ಲಲು ಕೊನೆಯ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ 19 ರನ್ ಗಳಿಸಬೇಕಿತ್ತು. ಆರ್‌ಸಿಬಿ ಪರ ಕೊನೆಯ ಓವರ್ ಮಾಡುವ ಜವಾಬ್ದಾರಿಯನ್ನು ಕೃನಾಲ್ ಪಾಂಡ್ಯ ಹೊತ್ತುಕೊಂಡರು. ಮೊದಲೆರಡು ಎಸೆತದಲ್ಲಿ ಕೃನಾಲ್ ಪಾಂಡ್ಯ 2 ವಿಕೆಟ್ ಕಬಳಿಸಿದರು. ಮೊದಲ ಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್ ಮತ್ತು ಎರಡನೇ ಎಸೆತದಲ್ಲಿ ದೀಪಕ್ ಚಹಾರ್ ವಿಕೆಟ್ ಕಳೆದುಕೊಂಡರು. ನಂತರ ಕೃನಾಲ್ ವೈಡ್ ಬಾಲಿ ಹಾಕಿದರು. ಟ್ರೆಂಟ್ ಬೌಲ್ಟ್ ಮೂರನೇ ಎಸೆತದಲ್ಲಿ ಸಿಂಗಲ್ ಪಡೆದರು. ನಮನ್ ಧೀರ್ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ಜೀವಂತವಾಗಿಟ್ಟರು. ಆದರೆ ಐದನೇ ಎಸೆತದಲ್ಲಿ ಔಟಾದರು. ಆರನೇ ಎಸೆತದಲ್ಲಿ ಬುಮ್ರಾ ಒಂದೇ ಒಂದು ರನ್ ಗಳಿಸಲು ಸಾಧ್ಯವಾಗಲಿಲ್ಲ.
ಟಾಸ್ ಸೋತು ಬ್ಯಾಟಿಂಗ್ ಮಾಡಲು ಬಂದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಜೋಡಿ ಉತ್ತಮ ಆರಂಭ ನೀಡಲಿಲ್ಲ. ಫಿಲ್ ಸಾಲ್ಟ್ ಕೇವಲ 4 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಎರಡನೇ ವಿಕೆಟ್‌ಗೆ ಒಟ್ಟಾಗಿ ಆರ್‌ಸಿಬಿಯನ್ನು ಉತ್ತಮ ಸ್ಕೋರ್‌ಗೆ ಕೊಂಡೊಯ್ದರು. ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ಬೌಲರ್‍ಗಳ ಬೆವರಿಳಿಸಿದ ದೇವದತ್ ಪಡಿಕ್ಕಲ್ ಆರ್‌ಸಿಬಿಗೆ ಅದ್ಭುತ ಆರಂಭ ನೀಡಿದರು.
ದೇವದತ್ ಪಡಿಕ್ಕಲ್ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಮತ್ತೊಂದೆಡೆ ಅಬ್ಬರಿಸುತ್ತಿದ್ದ ವಿರಾಟ್ ಕೊಹ್ಲಿ ಬಳಿಕ ಬಂದ ರಜತ್ ಪಾಟಿದಾರ್ ಜೊತೆಗೂಡಿ ಇನ್ನಿಂಗ್ಸ್ ಮುಂದುವರೆಸಿದರು. ಮುಂಬೈ ಇಂಡಿಯನ್ಸ್ ಬೌಲರ್‍ಗಳಿಗೆ ವಿರಾಟ್ ಕೊಹ್ಲಿ ಹಿಗ್ಗಾಮುಗ್ಗ ಬಾರಿಸಿದರು. 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 67 ರನ್ ಬಾರಿಸಿ ಔಟ್ ಆದರು.
ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಮುಂಬೈ ಬೌಲರ್‍ಗಳನ್ನು ರಜತ್ ಪಾಟಿದಾರ್ ತರಾಟೆಗೆ ತೆಗೆದುಕೊಂಡರು. ನಾಯಕನ ಆಟವಾಡಿದ ರಜತ್ ಪಾಟಿದಾರ್ ಆರ್‌ಸಿಬಿ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು. ರಜತ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‍ಗಳೊಂದಿಗೆ 64 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಲಿಯಾಮ್ ಲಿವಿಂಗ್ಸ್ಟೋನ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಜಿತೇಶ್ ಶರ್ಮಾ 19 ಎಸೆತಗಳಲ್ಲಿ 40 ರನ್ ಮತ್ತು ಟಿಮ್ ಡೇವಿಡ್ 1 ರನ್ ಗಳಿಸಿ ಅಜೇಯರಾಗುಳಿದರು. ಮುಂಬೈ ಪರ ಟ್ರೆಂಟ್ ಬೌಲ್ಟ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು.
ಐಪಿಎಲ್ 2025 ರಲ್ಲಿ ಮುಂಬೈ ತಂಡದ ಪ್ರದರ್ಶನ ಇಲ್ಲಿಯವರೆಗೆ ಅಷ್ಟೊಂದು ಉತ್ತಮವಾಗಿಲ್ಲ. ಮುಂಬೈ 5 ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿ ಸೋತಿದೆ. ಒಂದೇ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಪ್ರಸ್ತುತ ಎಂಟನೇ ಸ್ಥಾನದಲ್ಲಿದೆ.
ಆರ್‌ಸಿಬಿ ಸತತ ಎರಡು ಗೆಲುವುಗಳೊಂದಿಗೆ ಐಪಿಎಲ್ 2025 ರ ಸೀಸನ್ ಅನ್ನು ಅಬ್ಬರದಿಂದ ಆರಂಭಿಸಿತು. ಆದರೆ ಮೂರನೇ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಈಗ ಮುಂಬೈ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್: ವಿಲ್ ಜಾಕ್ಸ್, ರಿಯಾನ್ ರಿಕಲ್ಟನ್ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ವಿಘ್ನೇಶ್ ಪುತ್ತೂರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್‌ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಲ್.