RCB vs RR Eliminator: 2015ರ ಘಟನೆ ಮತ್ತೆ ಮರುಕಳಿಸುತ್ತಾ?
ಮೇ 20 ಸೋಮವಾರ, 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮ ಘಟ್ಟ ತಲುಪಿದ್ದು, ಪ್ಲೇ ಆಫ್‌ಗೆ ನಾಲ್ಕು ತಂಡಗಳು ಈಗಾಗಲೇ ಅರ್ಹತೆ ಪಡೆದುಕೊಂಡಿವೆ.
ಮೊದಲೆರಡು ಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಕ್ವಾಲಿಫೈಯರ್-1 ಪಂದ್ಯ ನಾಳೆ (ಮೇ 21) ನಡೆಲಿದೆ. ಈ ಪಂದ್ಯಕ್ಕೆ ಅಹಮಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಅತಿಥೇಯ ವಹಿಸಿದೆ.

ಬಳಿಕ ಅದೇ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ (ಮೇ 22) ಎಲಿಮಿನೇಟರ್-1 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಎದುರಿಸಲಿದೆ.
ಸತತ ಸೋಲಿನಿಂದ ಮಂಕಾಗಿದ್ದ ಆರ್‌ಸಿಬಿ ನಾಕೌಟ್ ಪಂದ್ಯದಲ್ಲಿ ಚೆನ್ನೈ ಸೂಪರರ್ ಕಿಂಗ್ಸ್ (ಸಿಎಸ್‌ಕೆಎ) ವಿರುದ್ಧ ಆಮೋಘ ಜಯ ಗಳಿಸಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. ಕಪ್ ಎತ್ತಿ ಹಿಡಿಯಲು ಕೇವಲ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿರುವ ಆರ್‌ಸಿಬಿಗೆ ಬಲಿಷ್ಠ ಎದುರಾಳಿ ತಂಡಗಳು ಮುಖಾಮುಖಿಯಾಗಲಿವೆ.

ಆರ್‌ಸಿಬಿಗೆ ಎಲಿಮಿನೇಟರ್-1 ನಲ್ಲಿ ಮೊದಲು ಆರ್‌ಆರ್ ಎದುರಾಗಲಿದ್ದು, ಉಭಯ ತಂಡಗಳ ಆಟಗಾರರು ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಎಲಿಮಿನೇಟರ್-1 ಪಂದ್ಯದಲ್ಲಿ ಆರ್‌ಸಿಬಿ ಮತ್ತು ಆರ್‌ಆರ್ ಸೆಣಸಾಡುತ್ತಿವೆ. ಇದಕ್ಕೂ ಮೊದಲು 2015ರಲ್ಲಿ ಮೊದಲ ಬಾರಿ ಉಭಯ ತಂಡಗಳು ಎದುರಾಗುದ್ದವು.
2015ರ ಆರ್‌ಸಿಬಿ vs ಆರ್‌ಆರ್ ಎಲಿಮಿನೇಟರ್-1
2015ರಲ್ಲಿ ಲೀಗ್ ಹಂತದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಆರ್‌ಆರ್ ವಿರುದ್ಧ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿತ್ತು. ಮೊದಲ ಪಂದ್ಯದಲ್ಲಿ ಆರ್‌ಆರ್ ಎದುರು 9 ವಿಕೆಟ್‌ಗಳಿಂದ ಆರ್‌ಸಿಬಿ ಗೆದ್ದು ಬೀಗಿತ್ತು.
ಬಳಿಕ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಬೃಹತ್ ರನ್ ಕಲೆಹಾಕಿತ್ತು. ಆದರೆ ಆರ್‌ಆರ್ ಚೇಸಿಂಗ್ ಮಾಡುವಾಗ ಕಾರಣಾಂತರಗಳಿಂದ ಪಂದ್ಯ ರದ್ದಾಗಿತ್ತು.
ನಂತರ ಎಲಿಮಿನೇಟರ್-1 ಪಂದ್ಯದಲ್ಲಿ ಆರ್‌ಆರ್ ಮತ್ತು ಆರ್‌ಸಿಬಿ ಎದುರಾಗಿದ್ದವು. ಈ ಪಂದ್ಯವನ್ನು ಅಭಿಮಾನಿಗಳು ಎಂದಿಗೂ ಮರೆಯಲು ಅಸಾಧ್ಯ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಸ್ಟೀವನ್ ಸ್ಮಿತ್ ಅವರು ಮುನ್ನೆಡೆಸುತ್ತಿದ್ದ ಆರ್‌ಆರ್ ಬೌಲಿಂಗ್ ಮಾಡಿತ್ತು.
ಆರ್‌ಸಿಬಿ ಪರ ಆರಂಭಿಕರಾಗಿ ಬಂದಿದ್ದ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಮೊದಲ ವಿಕೆಟ್‌ಗೆ 41 ರನ್‌ಗಳ ಜೊತೆಯಾಟವಾಡಿದ್ದರು. ಬಳಿಕ ಒಬ್ಬರಿಂದ ಒಬ್ಬರಂತೆ ಕೊಹ್ಲಿ (12) ಮತ್ತು ಗೇಲ್ (27) ವಿಕೆಟ್ ಕಳೆದುಕೊಂಡಿದ್ದರು.
ಮೂರನೇ ಕ್ರಮಾಂಕದಲ್ಲಿ ಒಂದಾದ ಎಬಿ ಡಿವಿಲಿಯರ್ಸ್ ಮತ್ತು ಮನದೀಪ್ ಸಿಂಗ್ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಎಬಿ ಡಿವಿಲಿಯರ್ಸ್ 38 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 66 ರನ್ ಗಳಿಸಿ ರನೌಟ್ ಆಗಿದ್ದರು.
ಮತ್ತೊಂದೆಡೆ ಮನದೀಪ್ ಸಿಂಗ್ 34 ಎಸೆತಗಳಲ್ಲಿ 2 ಸಿಕ್ಸರ್ ಹಾಗು 7 ಬೌಂಡರಿ ಮೂಲಕ ಅಜೇಯ 54 ರನ್ ಹೊಡೆದು ಆರ್‌ಸಿಬಿಗೆ ಆಸೆಯಾಗಿದ್ದರು. ದಿನೇಶ್ ಕಾರ್ತಿಕ್ 8 ರನ್‌ಗೆ ಔಟ್ ಆಗಿದ್ದರು. ಪರಿಣಾಮ ಆರ್‌ಸಿಬಿ 4 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು.
181 ರನ್ ಗುರಿ ಬೆನ್ನಟ್ಟಿದ್ದ ಆರ್‌ಆರ್ ಆರಂಭದಲ್ಲಿ ಶೇನ್ ವ್ಯಾಟ್ಸನ್ (16) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಜಿಂಕ್ಯ ರಹಾನೆ (42) ಹೊರತುಪಡಿಸಿ ನಂತರ ಬಂದ ಯಾವುದೇ ಬ್ಯಾಟರ್‌ಗಳು ಆರ್‌ಸಿಬಿ ಆಕ್ರಮಕಾರಿ ಬೌಲಿಂಗ್ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ಆರ್‌ಆರ್ 19 ಓವರ್‌ಗಳಲ್ಲಿ 109 ರನ್‌ಗೆ ಆಲೌಟ್ ಆಗಿತ್ತು. ಆರ್‌ಸಿಬಿ 71 ರನ್‌ಗಳ ಅಮೋಘ ಗೆಲುವು ಸಾಧಿಸಿತ್ತು. ಇದೀಗ 9 ವರ್ಷಗಳ ನಂತರ ಆರ್‌ಸಿಬಿ ಮತ್ತು ಆರ್‌ಆರ್ ಎಲಿಮಿನೇಟರ್-1 ಪಂದ್ಯದಲ್ಲಿ ಎದುರಾಗಿವೆ.
ಆರ್‌ಆರ್ ವಿರುದ್ಧ ಆರ್‌ಸಿಬಿ 2015ರಲ್ಲಿ ನೀಡಿದ ಪ್ರದರ್ಶನ ಮತ್ತೆ ಮರುಕಳಿಸುವುದೇ? ಎಂಬುದನ್ನು ಕಾದು ನೋಡ ಬೇಕಾಗಿದೆ. ಈ ಬಾರಿ ಲೀಗ್ ಹಂತದಲ್ಲಿ ಆರ್‌ಆರ್ ಎದುರು ಆರ್‌ಸಿಬಿ ಪಂದ್ಯ ಸೋತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications