RCB vs RR: ಕಳಪೆ ಬೌಲಿಂಗ್‌ಗೆ ವಿರಾಟ್ ಕೊಹ್ಲಿ ಶತಕ ವ್ಯರ್ಥ; ಆರ್‌ಸಿಬಿ ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ್ ರಾಯಲ್ಸ್
ಶನಿವಾರ, ಏಪ್ರಿಲ್ 6ರಂದು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 19ನೇ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡದ ವಿರುದ್ಧ ಪ್ರವಾಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿದೆ.
ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಐಪಿಎಲ್‌ನ 8ನೇ ಶತಕ ಹಾಗೂ ಸವಾಲಿನ ಮೊತ್ತ ಗಳಿಸಿದ ಹೊರತಾಗಿಯೂ, ಕಳಪೆ ಬೌಲಿಂಗ್ ಪ್ರದರ್ಶನದಿಂದ ಮತ್ತೆ ಮುಖಭಂಗ ಅನುಭವಿಸಿದೆ. ಈ ಮೂಲಕ ಐಪಿಎಲ್ 2024ರಲ್ಲಿ ಆರ್‌ಸಿಬಿ ತಂಡ ಆಡಿದ 5 ಪಂದ್ಯಗಳಲ್ಲಿ ನಾಲ್ಕು ಸೋಲು ಮತ್ತು ಒಂದು ಗೆಲುವು ಪಡೆದಿದೆ.

ಮತ್ತೊಂದೆಡೆ, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಸತತ ನಾಲ್ಕನೇ ಪಂದ್ಯಗಳ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್‌ಗಳನ್ನು ಕಲೆಹಾಕಿತ್ತು.

184 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ಅವರ ಅಮೋಘ ಶತಕ ಮತ್ತು ಸಂಜು ಸ್ಯಾಮ್ಸನ್ ಅವರ ಭರ್ಜರಿ ಅರ್ಧಶತಕದ ಸಹಾಯದಿಂದ 19.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಯಶಸ್ವಿ ಜೈಸ್ವಾಲ್ ಮೊದಲ ಓವರ್‌ನಲ್ಲಿಯೇ ಡಕ್‌ಗೆ ಔಟಾದರು.
ಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್ ಆಕ್ರಮಣಕಾರಿ ಆಟಕ್ಕೆ ಮುಂದಾದರು ಮತ್ತು ಜೋಸ್ ಬಟ್ಲರ್ ಜೊತೆಗೂಡಿ 2ನೇ ವಿಕೆಟ್‌ಗೆ 148 ರನ್‌ಗಳ ಜೊತೆಯಾಟ ನಿರ್ಮಿಸಿ ತಂಡದ ಗೆಲುವಿಗೆ ಮುನ್ನುಡಿ ಬರೆದರು. ಈ ವೇಳೆ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 69 ರನ್ ಗಳಿಸಿ ಔಟಾದರು.
ಆರಂಭಿಕ ಜೋಸ್ ಬಟ್ಲರ್ ಕೊನೆಯವರೆಗೂ ಬ್ಯಾಟಿಂಗ್ ಮಾಡಿದರು ಮತ್ತು 58 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಮೂಲಕ 100 ರನ್‌ಗಳ ಶತಕ ಬಾರಿಸಿದರು. ಉಳಿದಂತೆ ರಿಯಾನ್ ಪರಾಗ್ 4 ರನ್, ಧ್ರುವ್ ಜುರೆಲ್ 2 ರನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅಜೇಯ 11 ರನ್ ಗಳಿಸಿದರು.
ಇನ್ನು ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಪರ ರೀಸ್ ಟೋಪ್ಲೆ 4 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರೆ, ಯಶ್ ದಯಾಳ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಆರ್‌ಸಿಬಿ ತಂಡದ ಇನ್ನಿಂಗ್ಸ್ ಆರಂಭಿಸಿದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 14 ಓವರ್‌ಗಳಲ್ಲಿ 125 ರನ್‌ಗಳ ಬೃಹತ್ ಜೊತೆಯಾಟ ನಿರ್ಮಿಸಿತು.
ಫಾಫ್ ಡು ಪ್ಲೆಸಿಸ್ 33 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 44 ರನ್ ಗಳಿಸಿ ಔಟಾದರು. ನಂತರ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ವೈಫಲ್ಯ ಕಂಡರು ಮತ್ತು ಕೇವಲ 1 ರನ್ ಗಳಿಸಿದರು. ಚೊಚ್ಚಲ ಐಪಿಎಲ್ ಪಂದ್ಯವಾಡಿದ ಸೌರವ್ ಚೌಹಾಣ್ 6 ಎಸೆತಗಳಲ್ಲಿ 9 ರನ್ ಗಳಿಸಿದರು. ಉಳಿದಂತೆ ಕ್ಯಾಮೆರಾನ್ ಗ್ರೀನ್ ಅಜೇಯ 6 ರನ್ ಗಳಿಸಿದರು.
ಮತ್ತೊಮ್ಮೆ ಏಕಾಂಗಿಯಾಗಿ ಮುನ್ನಡೆಸಿದ ವಿರಾಟ್ ಕೊಹ್ಲಿ ಅಮೋಘ ಶತಕ ಬಾರಿಸಿದರು. 72 ಎಸೆತಗಳನ್ನು ಎದುರಿಸಿ 12 ಬೌಂಡರಿಗಳು ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 113 ರನ್ ಕಲೆಹಾಕಿದರು.
ಅಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ 7500 ರನ್‌ಗಳ ಮೈಲುಗಲ್ಲನ್ನು ತಲುಪಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾದರು. ರಾಜಸ್ಥಾನ್ ರಾಯಲ್ಸ್ 34 ರನ್ ಗಳಿಸುತ್ತಿದ್ದಂತೆಯೇ ಬೃಹತ್ ದಾಖಲೆ ನಿರ್ಮಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications