ಆರ್‌ಸಿಬಿ ತಂಡದ ಸ್ಟಾರ್ ಆಟಗಾರರ ಸಂಘಟಿತ ಆಟದ ನೆರವಿನಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದನದಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದ ಆರ್‌ಸಿಬಿ 11 ರನ್‌ಗಳಿಂದ ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಮನಮೋಹಕ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ಪೂರ್ಣ ಎರಡು ಅಂಕಗಳನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 205 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 194 ರನ್ ಸಿಡಿಸಿ ಸೋಲು ಕಂಡಿತು. ಈ ಗೆಲುವಿನ ಮೂಲಕ ಆರ್‌ಸಿಬಿ 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಇನ್ನು ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ಕನಸು ಕಷ್ಟವಾಗಿದೆ. ಆರ್‌ಆರ್ ಆಡಿದ 9 ಪಂದ್ಯಗಳಲ್ಲಿ 2 ಜಯ ಸಾಧಿಸಿದೆ. ಇನ್ನು ಉಳಿದ ಐದು ಪಂದ್ಯಗಳನ್ನು ಗೆದ್ದು ಬೇರೆ ಪಂದ್ಯಗಳ ಫಲಿತಾಂಶದ ಮೇಲೆ ಕಾಯುತ್ತಲೇ ಇರಬೇಕು.

ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಉತ್ತಮ ಆಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಆರಂಭದಲ್ಲಿ ಆರ್‌ಸಿಬಿ ಬೌಲರ್‌ಗಳು ಶ್ರಮಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 4.2 ಓವರ್‌ಗಳಲ್ಲಿ 52 ರನ್ ಸಿಡಿಸಿತು. ಈ ವೇಳೆ 14 ವರ್ಷದ ವೈಭವ್ 2 ಸಿಕ್ಸರ್ ಸಹಾಯದಿಂದ 16 ರನ್ ಬಾರಿಸಿ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಬೋಲ್ಡ್ ಆದರು.
ಸ್ಫೋಟಕ ಆಟವನ್ನು ಆಡುತ್ತಿದ್ದು ಯಶಸ್ವಿ ಜೈಸ್ವಾಲ್ ಭರ್ಜರಿ ಆಟವನ್ನು ಆಡಿದರು. ಇವರು ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಾಡಿ, ಆರ್‌ಸಿಬಿ ತಂಡದ ಸ್ಟಾರ್ ಬೌಲರ್‌ಗಳ ವಿರುದ್ಧ ರನ್ ಹೊಳೆ ಹರಿಸಿದರು. ಯಶಸ್ವಿ 19 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ನೆರವಿನಿಂದ 49 ರನ್ ಸಿಡಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಜೋಶ್ ಹ್ಯಾಜಲ್‌ವುಡ್ ಎಸೆತದಲ್ಲಿ ಔಟ್ ಆದರು.
ಯಶಸ್ವಿ ಔಟ್ ಆಗುತ್ತಿದ್ದಂತೆ ಮೈದಾನಕ್ಕೆ ಇಳಿದ ರಿಯಾನ್ ಪರಾಗ್ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಯೋಜನೆಯನ್ನು ಹಾಕಿಕೊಂಡೇ ಮೈದಾನಕ್ಕೆ ಇಳಿದಿದ್ದರು. ಇವರು 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 22 ರನ್ ಬಾರಿಸಿ ಇಲ್ಲದ ಶಾಟ್ ಹೊಡೆಯಲು ಹೋಗಿ ಔಟ್ ಆದರು. ಐದನೇ ವಿಕೆಟ್‌ಗೆ ಶಿಮ್ರೊನ್ ಹೆಟ್ಮೆಯರ್ ಹಾಗೂ ಧ್ರುವ್ ಜುರೇಲ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 18 ಎಸೆತಗಳಲ್ಲಿ 28 ರನ್ ಸಿಡಿಸಿತು. ಶಿಮ್ರೊನ್ 11 ರನ್ ಬಾರಿಸಿದ್ದಾಗ ಜೋಶ್ ಹ್ಯಾಜಲ್‌ವುಡ್ ತೋಡಿದ್ದ ಖೆಡ್ಡಾಗೆ ಬಲಿಯಾದರು.
ಧ್ರುವ್ ಜುರೇಲ್ ತಮ್ಮ ಅನುಭವವನ್ನು ಬಳಸಿಕೊಂಡು ಬ್ಯಾಟ್ ಮಾಡಿದರು. ಇವರು ಭುವನೇಶ್ವರ್ ಕುಮಾರ್ ಅವರು ಎಸೆದ 18ನೇ ಓವರ್‌ನಲ್ಲಿ 22 ರನ್ ಬಾರಿಸಿದರು. ಇದರಲ್ಲಿ ಹೆಚ್ಚಿನ ಕೊಡುಗೆ ಧ್ರುವ್ ಜುರೇಲ್ ಅವರದ್ದಾಗಿತ್ತು. ಈ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿನ ಆಸೆ ಚಿಗುರಿತು. ಈ ವೇಳೆ ಕೊನೆಯ ಎರಡು ಓವರ್‌ಗಳಲ್ಲಿ 18 ರನ್ ಬೇಕಿತ್ತು. ಈ ವೇಳೆ ಜೋಶ್ ಹ್ಯಾಜಲ್‌ವುಡ್ 19ನೇ ಓವರ್‌ನಲ್ಲಿ 2 ವಿಕೆಟ್ ಪಡೆದು 1 ರನ್ ನೀಡಿ ಅಬ್ಬರಿಸಿದರು.
ಕೊನೆಯ ಓವರ್‌ನಲ್ಲಿ ಯಶ್ ದಯಾಳ್ ಸಹ ಬಿಗುವಿನ ದಾಳಿ ನಡೆಸಿದರು. ಇವರು 20ನೇ ಓವರ್‌ನಲ್ಲಿ 5 ರನ್ ನಿಡಿ 2 ವಿಕೆಟ್ ಕಬಳಿಸಿದರು. ರಾಜಸ್ಥಾನ ಮತ್ತೊಂದು ಸುಲಭವಾಗಿ ಗೆಲ್ಲ ಬಹುದಾದ ಪಂದ್ಯವನ್ನು ಕೈ ಚೆಲ್ಲಿದೆ. 19ನೇ ಓವರ್‌ನಲ್ಲಿ ಮ್ಯಾಜಿಕ್ ಮಾಡಿದ ಜೋಶ್ ಹ್ಯಾಜಲ್‌ವುಡ್ ಮುಡಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭ ಭರ್ಜರಿಯಾಗಿತ್ತು. ಪವರ್ ಪ್ಲೇನಲ್ಲಿ ಆರ್‌ಸಿಬಿ ಪವರ್ ಫುಲ್ ಆರಂಭವನ್ನು ಪಡೆಯಿತು. ಕಳೆದ ಮೂರು ಪಂದ್ಯಗಳಲ್ಲಿ ಮಾಡಿದ ತಪ್ಪನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಆರ್‌ಸಿಬಿ ಅಬ್ಬರಿಸಿತು. ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದಂತೆ ಬ್ಯಾಟ್ ಮಾಡಿದ ರಜತ್ ಪಟಿದಾರ್ ಪಡೆ, ಬೃಹತ್ ಮೊತ್ತದತ್ತ ಮುಖ ಮಾಡಿತು. ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್ಗೆ 61 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಫಿಲ್ ಸಾಲ್ಟ್ 4 ಬೌಂಡರಿ ನೆರವಿನಿಂದ 26 ರನ್ ಬಾರಿಸಿ ಮುನ್ನುಗುತ್ತಿದ್ದಾಗ ವನಿಂದು ಹಸರಂಗ್ ತೋಡಿದ ಖೆಡ್ಡಾಗೆ ಬಲಿಯಾದರು.
ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದರು. ಇವರು ಐಪಿಎಲ್‌ನಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಮುಂದುವರೆಸಿದರು. ಇವರು 32 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ ಅರ್ಧಶತಕ ಬಾರಿಸಿ ಅಬ್ಬರಿಸಿದರು.
ತವರಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಟಾಸ್ ಸೋತರೂ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ತವರಿನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ಉತ್ತಮ ಆಟವನ್ನು ನೀಡಿತು. ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟದ ಬಳಿಕ ಎರಡನೇ ವಿಕೆಟ್‌ಗೂ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅಮೋಘ ಬ್ಯಾಟಿಂಗ್ ನಡೆಸಿದರು. ಈ ಜೋಡಿಯನ್ನು ಕಟ್ಟಿ ಹಾಕಲು ರಾಜಸ್ಥಾನ ಬೌಲರ್‌ಗಳು ವಿಫಲರಾದ್ರು.
ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ದೇವದತ್ ಜೋಡಿ 51 ಎಸೆತಗಳಲ್ಲಿ 95 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 70 ರನ್ ಬಾರಿಸಿ ಔಟ್ ಆದರು. ಇವರು ಔಟ್ ಆಗುತ್ತಿದ್ದಂತೆ ದೇವದತ್ ಪಡಿಕ್ಕಲ್ ಇಲ್ಲದ ಶಾಟ್ ಪ್ರಯೋಗಿಸಿ ಔಟ್ ಆದರು. ಇವರು 27 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 50 ರನ್ ಸಿಡಿಸಿ ಔಟ್ ಆದರು.

ನಾಯಕ ರಜತ್ ಪಟಿದಾರ್ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. 163 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಟೀಮ್ ಡೇವಿಡ್ (23 ರನ್) ಹಾಗೂ ಜಿತೇಶ್ ಶರ್ಮಾ (ಅಜೇಯ 19 ರನ್) ಆಧಾರವಾದರು. ಈ ಜೋಡಿ ತಂಡ ಹಾಕಿಕೊಂಡಿದ್ದ ಬೃಹತ್ ಮೊತ್ತದತ್ತ ದಾಪುಗಾಲು ಇಡಲು ನೆರವು ನೀಡಿತು. ಐದನೇ ವಿಕೆಟ್‌ಗೆ 19 ಎಸೆತಗಳಲ್ಲಿ 42 ರನ್ ಸಿಡಿಸಿತು. ಆರ್‌ಸಿಬಿ ಡೆತ್ ಓವರ್‌ಗಳಲ್ಲಿ 45 ರನ್ ಸಿಡಿಸಿ ಮೂರು ವಿಕೆಟ್ ಕಳೆದುಕೊಂಡಿತು.
ರಾಜಸ್ಥಾನ ರಾಯಲ್ಸ್ ಪರ ವೇಗಿ ಸಂದೀಪ್ ಶರ್ಮಾ 45 ರನ್‌ಗೆ 2 ವಿಕೆಟ್ ಕಬಳಿಸಿದರು. ಉಳಿದಂತೆ ವನಿಂದು ಹಸರಂಗ ಹಾಗೂ ಜೋಫ್ರಾ ಆರ್ಚರ್ ತಲಾ ಒಂದು ವಿಕೆಟ್ ಪಡೆದರು.