RCB vs RR: ಅಗ್ರಸ್ಥಾನಕ್ಕೇರುವ ಕನಸಿನಲ್ಲಿ ಆರ್‌ಸಿಬಿ, ಅಜೇಯ ಓಟವನ್ನು ಮುಂದುವರೆಸುವ ಆಸೆಯಲ್ಲಿ ರಾಯಲ್ಸ್
19ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಗುವಾಹಟಿಯಲ್ಲಿ ಬಿಗ್ ಫೈಟ್ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ತನ್ನ ಹ್ಯಾಟ್ರಿಕ್ ಗೆಲುವಿನ ನಗೆ ಬೀರುವ ಲೆಕ್ಕಾಚಾರದಲ್ಲಿ ಆರ್‌ಸಿಬಿ ಇದೆ. ಇನ್ನು ರಾಜಸ್ಥಾನ್ ರಾಯಲ್ಸ್ ಈಗಾಗಲೇ ಲೀಗ್‌ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ತನ್ನ ಜಯದ ಓಟವನ್ನು ಮುಂದುವರೆಸುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಉಳಿಸಿಕೊಳ್ಳುವ ಅಭಿಯಾನವನ್ನು ಅಮೋಘವಾಗಿ ಆರಂಭಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡವನ್ನು ಮಣಿಸಿದ ಆರ್‌ಸಿಬಿ, ಎರಡನೆ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಶುಕ್ರವಾರ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರುವ ಪ್ಲ್ಯಾನ್ ಆರ್‌ಸಿಬಿ ತಂಡದ್ದಾಗಿದೆ. ಇನ್ನು ರಾಯಲ್ಸ್ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದ್ದು ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ.

ಇದೇ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಎದುರಾದಾಗ ಮಳೆ ಬಂದು ಓವರ್‌ಗಳಿಗೆ ಕತ್ತರಿ ಬಿದ್ದಿತ್ತು. ಸದ್ಯದ ಮಾಹಿತಿಯ ಪ್ರಕಾರ ಮಳೆಯ ಯಾವುದೇ ಸೂಚನೆ ಇಲ್ಲ. ಉಭಯ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ 34 ಬಾರಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 17 ಪಂದ್ಯಗಳನ್ನು, ಆರ್‌ಆರ್ 14 ಪಂದ್ಯಗಳನ್ನು ಗೆದ್ದಿದೆ. 3 ಪಂದ್ಯಗಳ ಫಲಿತಾಂಶ ರದ್ದಾಗಿದೆ.
ದೇವದತ್, ಡೇವಿಡ್ ಆಕರ್ಷಣೆ
ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಉಭಯ ಆಟಗಾರರು ಲಯ ಕಂಡುಕೊಂಡಿದ್ದು, ಬಿಗ್ ಇನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾಗಬೇಕಿದೆ. ವಿರಾಟ್ ಕೊಹ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದ್ದು ಭರವಸೆ ಮೂಡಿಸಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ದೇವದತ್ ಪಡಿಕ್ಕಲ್ ಭರ್ಜರಿ ಫಾರ್ಮ್‌ನಲ್ಲಿದ್ದು, ರಾಯಲ್ಸ್ ಚಿಂತೆ ಹೆಚ್ಚಿಸಿದ್ದಾರೆ. ಇವರು ಈಗಾಗಲೇ ಲೀಗ್‌ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ. ಹೀಗಾಗಿ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ನಾಯಕ ರಜತ್ ಪಾಟಿದಾರ್ ನಾಲ್ಕನೇ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಬಲ್ಲ ಪ್ಲೇಯರ್. ಫಿನಿಷರ್ ಪಾತ್ರದಲ್ಲಿ ಮಿಂಚಲು ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್ ತುದಿಗಾಲಿನಲ್ಲಿ ನಿಂತಿದ್ದಾರೆ.
ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಕೃನಾಲ್ ಪಾಂಡ್ಯ ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಬೇಕಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಜೇಕಬ್ ಡಫಿ ಹಾಗೂ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಎದುರಾಳಿಗಳನ್ನು ಕಾಡಲು ಸಿದ್ಧರಾಗಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲಿ ಸುಯಶ್ ಶರ್ಮಾ ಫಿರ್ಕಿ ಕಮಾಲ್ ನಡೆಸಬೇಕಿದೆ. ಅಂದಾಗ ಗೆಲುವಿನ ಆಸೆ ಫಲಿಸುತ್ತದೆ.

ಯುವ ಆಟಗಾರರೇ ಬಲ
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸ್ಟಾರ್ ಯುವ ಆಟಗಾರರ ದಂಡೇ ಇದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಯಶಸ್ವಿ ಜೈಸ್ವಾಲ್ ಹಾಗೂ 15 ವರ್ಷ ವೈಭವ್ ಸೂರ್ಯವಂಶಿ ಯಾವುದೇ ಬೌಲರ್‌ಗಳನ್ನು ಕಾಡಬಲ್ಲ ಕ್ಷಮತೆ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್, ಧ್ರುವ್ ಜುರೇಲ್, ಶಿಮ್ರೊನ್ ಹೆಟ್ಮೆಯರ್ ಸ್ಥಿರ ಆಟದ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ರವಿ ಬಿಷ್ಣೋಯಿ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸುವ ಭರವಸೆ ಮೂಡಿಸಿದ್ದಾರೆ. ಹೀಗಾಗಿ ಶುಕ್ರವಾರದ ಪಂದ್ಯ ರೋಚಕತೆ ಹುಟ್ಟಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications