ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಯುಪಿ ವಾರಿಯರ್ಸ್, ಮಹಿಳಾ ಪ್ರೀಮಿಯರ್ ಲೀಗ್ ನ ಒಂಬತ್ತನೇ ಪಂದ್ಯದಲ್ಲಿ ಫೈಟ್ ನಡೆಸಲಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ, ಗೆಲುವಿನ ಟ್ರ್ಯಾಕ್‌ಗೆ ಮರಳುವ ವಿಶ್ವಾಸ ಸ್ಮೃತಿ ಪಡೆಯದ್ದಾಗಿದೆ.
ಆರ್‌ಸಿಬಿ ತಂಡ ಆಡಿರುವ ಮೂರು ಪಂದ್ಯಗಳಲ್ಲಿ 2 ಜಯ, 1 ಸೋಲು ಕಂಡಿದ್ದು, 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಯುಪಿ ವಾರಿಯರ್ಸ್ 3 ಪಂದ್ಯಗಳಲ್ಲಿ 1 ಗೆಲುವು, 2 ಸೋಲು ಕಂಡಿದ್ದು, 2 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಉಭಯ ತಂಡದಲ್ಲೂ ಸ್ಟಾರ್ ಆಟಗಾರ್ತಿಯರು ಇದ್ದು ರೋಚಕತೆ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರವನ್ನು ವಹಿಸಲಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ ಸ್ಪರ್ಧಾತ್ಮ ಮೊತ್ತವನ್ನು ಕಲೆ ಹಾಕುವಲ್ಲಿ ಪ್ರಮುಖ ಕಾಣಿಕೆ ನೀಡಿದ್ದ ಎಲ್ಲಿಸ್ ಪೆರ್ರಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಲೀಲಾಜಾಲ ಬ್ಯಾಟಿಂಗ್‌ಗೆ ಅಭಿಮಾನಿಗಳು ಮನಸೋತಿದ್ದಾರೆ. ಇನ್ನು ಆರಂಭಿಕರಾಗಿ ಕಾಣಿಸಿಕೊಳ್ಳುವ ಡ್ಯಾನ್ ವೈಟ್ ಹಾಗೂ ಸ್ಮೃತಿ ಮಂಧನಾ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಬೇಕಿದೆ. ಪವರ್ ಪ್ಲೇನಲ್ಲಿ ಈ ಜೋಡಿ ಪವರ್ ಫುಲ್ ಆರಂಭವನ್ನು ನೀಡುವ ಅನಿವಾರ್ಯತೆ ಇದೆ. ಆರ್‌ಸಿಬಿ ತಂಡಕ್ಕೆ ಮಿಡ್ಲ್ ಆರ್ಡರ್‌ನಲ್ಲಿ ರಿಚಾ ಘೋಷ್ ಆಧಾರ. ಇವರೊಂದಿಗೆ ಉಳಿದ ಆಟಗಾರರು ಸಹ ಪಾರ್ಟಿಗೆ ಬರಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತವನ್ನು ಕಲೆ ಹಾಕುವ ಆರ್‌ಸಿಬಿ ಕನಸು ನನಸಾಗುತ್ತದೆ.
ಎಲ್ಲಿಸ್ ಪೆರ್ರಿ, 3 ಪಂದ್ಯ, 145 ರನ್
ಸ್ಮೃತಿ ಮಂಧನಾ, 3 ಪಂದ್ಯ, 116 ರನ್
ರಿಚಾ ಘೋಷ್, 3 ಪಂದ್ಯ, 103 ರನ್

ಆರ್‌ಸಿಬಿ ತಂಡದ ಬೌಲರ್‌ಗಳು ತಮ್ಮ ಕ್ಷಮತೆಗೆ ತಕ್ಕ ಪ್ರದರ್ಶನ ನೀಡಬೇಕಿದೆ. ಭರವಸೆಯ ಬೌಲರ್‌ಗಳಾದ ಜಾರ್ಜಿಯಾ ವೇರ್‌ಹ್ಯಾಮ್ ಹಾಗೂ ರೇಣುಕಾ ಸಿಂಗ್ ಆರಂಭದಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಇವರಿಗೆ ಮಿಡ್ಲ್ ಓವರ್ಸ್‌ನಲ್ಲಿ ಉಳಿದ ಬೌಲರ್‌ಗಳು ಸಹ ಉತ್ತಮ ಸಾಥ್ ನೀಡಬೇಕಿದೆ. ಯುವ ಆಟಗಾರ್ತಿ ವಿಜೆ ಜೋಶಿತಾ, ಕನಿಕಾ ಅಹುಜಾ, ಏಕ್ತಾ ಬಿಷ್ಟ್ ಸರಿಯಾದ ಸ್ಥಳದಲ್ಲಿ ಬೌಲ್ ಮಾಡಿ ಎದುರಾಳಿಗಳನ್ನು ಕಾಡಬೇಕಿದೆ. ಅಂದಾಗ ಗೆಲುವಿನ ಆಸೆ ಫಲಿಸುತ್ತದೆ.
ಜಾರ್ಜಿಯಾ ವೇರ್‌ಹ್ಯಾಮ್, 3 ಪಂದ್ಯ, 7 ವಿಕೆಟ್
ರೇಣುಕಾ ಸಿಂಗ್, 5 ಪಂದ್ಯ, 5 ವಿಕೆಟ್
ಕಿಮ್ ಗಾರ್ತ್, 3 ಪಂದ್ಯ, 4 ವಿಕೆಟ್
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಇತಿಹಾಸ ನಿರ್ಮಿಸಿರುವ ಚಿನೆಲ್ಲೆ ಹೆನ್ರಿ ಈ ತಂಡದ ಬಲವಾಗಿದ್ದಾರೆ. ಇವರಿಗೂ ಮುನ್ನ ಬ್ಯಾಟಿಂಗ್ ಮಾಡುವ ಟಾಪ್ ಆರ್ಡರ್ ಬ್ಯಾಟರ್‌ಗಳು ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ. ಅಲ್ಲದೆ ದೀಪ್ತಿ ಶರ್ಮಾ ತಮ್ಮ ಲಯವನ್ನು ಬಹು ಬೇಗ ಕಂಡು ಕೊಳ್ಳುವ ಅವಶ್ಯಕತೆ ಇದೆ. ಯುವ ಹಾಗೂ ಭರವಸೆಯ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡಿದಾಗ ಗೆಲುವು ಸಾಧ್ಯ.
ಚಿನೆಲ್ಲೆ ಹೆನ್ರಿ, 2 ಪಂದ್ಯ, 95 ರನ್
ಕಿರಣ್ ನವಗಿರೆ, 2 ಪಂದ್ಯ, 83 ರನ್
ಶ್ವೇತಾ ಶೇರಾವತ್, 3 ಪಂದ್ಯ, 64 ರನ್