WPL 2026 RCB: ವಡೋದರಾದಲ್ಲಿ ನಡೆದ ಕ್ರಿಕೆಟ್‌ನ ನಾಲ್ಕನೇ ಆವೃತ್ತಿಯ ಡಬ್ಲ್ಯೂಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಆರ್‌ಸಿಬಿ ಎರಡನೇ ಟ್ರೋಫಿಗೆ ಮುತ್ತಿಟ್ಟಿತು. ಇದರ ಬೆನ್ನಲ್ಲೇ ಇದೀಗ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಖ್ಯಾತ ಉದ್ಯಮಿ ವಿಜಯ್ ಮಲ್ಯ ಸ್ಮೃತಿ ಮಂಧಾನ ಬಳಗಕ್ಕೆ ವಿಶೇಷ ಸಂದೇಶವನ್ನು ರವಾನೆ ಮಾಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್‌ಸಿಬಿ: ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಬರೋಬ್ಬರಿ 203 ರನ್‌ಗಳನ್ನು ಕಲೆಹಾಕಿತು. ಇನ್ನೂ ಡೆಲ್ಲಿ ನೀಡಿದ 204 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ತಂಡ ಕೊನೆಯ ಹಂತದವರೆಗೂ ಹೋರಾಟ ನಡೆಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಡೆಲ್ಲಿ ಕ್ಯಾಪಿಟಲ್ಸ್ ಆಕ್ರಮಣಕಾರಿ ಬ್ಯಾಟಿಂಗ್: ಮೊದಲು ಬ್ಯಾಟ್ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ಜೆಮಿಮಾ ರೋಡ್ರಿಗ್ಸ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಕ್ರಮಣಕಾರಿ ಆರಂಭದೊಂದಿಗೆ ಭಾರಿ ಮೊತ್ತ ದಾಖಲಿಸಿತು. ಆರಂಭಿಕರಾಗು ಕಣಕ್ಕಿಳಿದ ಲಿಜೆಲ್ಲೆ ಲೀ 37(30), ಶಫಾಲಿ ವರ್ಮಾ 20(13) ರನ್‌ಗಳನ್ನು ಕಲೆಹಾಕಿದರೆ, ಲೌರಾ ವೊಲ್ವಾರ್ಡ್ಟ್ 44(25), ನಾಯಕಿ ಜೆಮಿಮಾ ರೋಡ್ರಿಗ್ಸ್ 57(37) ಗಳಿಸಿ ವಿಕೆಟ್ ಒಪ್ಪಿಸಿದರೆ, ಚಿನೆಲ್ಲೆ ಹೆನ್ರಿ ಅವರು ಅಜೆಯ 35(15) ರನ್‌ಗಳನ್ನು ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 203 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್: ಆರ್‌ಸಿಬಿ ಬೌಲರ್‌ಗಳು ಮಧ್ಯ ಓವರ್‌ಗಳಲ್ಲಿ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೂ, ಡೆಲ್ಲಿ ತಂಡ ಬೃಹತ್ ಸ್ಕೋರ್ ಕಲೆಹಾಕಿತು. ಡೆಲ್ಲಿ ನೀಡಿದ 204 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ ಪರ ಆರಂಭಿಕ ಜೋಡಿ ಉತ್ತಮವಾಗಿ ಆಟ ಆಡಿದರು. ಗ್ರೇಸ್ ಹ್ಯಾರಿಸ್ 9 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದಾಗ ತಂಡ ಆರಂಭಕ್ಕೆ ಸಂಕಷ್ಟಕ್ಕೆ ಸಿಲುಕಿತು. ಆದರೆ, ಬಳಿಕ ಸ್ಮೃತಿ ಮಂಧಾನ ಜೊತೆ ಕಣಕ್ಕಿಳಿದ ಜಾರ್ಜಿಯಾ ವೋಲ್ ಅವರು ಸ್ಫೋಟಕ ಇನ್ನಿಂಗ್ಸ್ ಆಡಿದರು. ಇವರಿಬ್ಬರು ಕಲೆಹಾಕಿದ ಬೃಹತ್ ರನ್‌ಗಳಿಂದಲೇ ಆರ್‌ಸಿಬಿ ಗೆಲುವಿನ ದಡ ಮುಟ್ಟಲು ಪ್ರಮುಖ ಕಾರಣವಾಯಿತು.
ನಾಯಕಿ ಸ್ಮೃತಿ ಮಂಧಾನ 41 ಎಸೆತಗಳಲ್ಲಿ 3 ಸಿಕ್ಸ್, 12 ಬೌಂಡಿಗಳ ಸಹಿತ 87 ರನ್‌ಗಳನ್ನು ಕಲೆಹಾಕಿದರೆ, ಜಾರ್ಜಿಯಾ ವೋಲ್ 54 ಬಾಲ್‌ಗಳಲ್ಲಿ 14 ಬೌಂಡರಿ ಸಹಿತ 79 ರನ್‌ಗಳನ್ನು ಬಾರಿಸಿದರು. ಇವರಿಬ್ಬರ ಈ ಬೃಹತ್ ರನ್‌ಗಳಿಂದ ತಂಡ ಗೆಲುವಿನ ಹಾದಿ ಸುಗಮವಾಯಿತು. ಬಳಿಕ ರಿಚಾ ಘೋಷ್ 6(6) ಗಳಿಸಿ ವಿಕೆಟ್ ಒಪ್ಪಿಸಿದರೆ, ಕೊನೆಯಲ್ಲಿ ನಾಡಿನ್ ಡಿ ಕ್ಲರ್ಕ್ ಅಜೇಯ 7(5), ರಾಧಾ ಯಾದವ್ ಎರಡು ಬೌಂಡರಿಗಳ ಸಹಿತ 12 ರನ್ ಕಲೆಹಾಕಿ ತಂಡವನ್ನು ಗೆಲುವಿನ ದಡ ಮುಟ್ಟಿಸಿ ಅಜೇಯರಾಗಿ ಉಳಿದರು.
ಆರ್‌ಸಿಬಿ ತಂಡಕ್ಕೆ ವಿಶೇಷ ಸಂದೇಶ: ಈ ಗೆಲುವಿನೊಂದಿಗೆ ಆರ್‌ಸಿಬಿ ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದು, ಅಭಿಮಾನಿಗಳಿಗೆ ಅಪಾರ ಸಂತಸ ತಂದಿದೆ. ಇನ್ನೂ ಆರ್‌ಸಿಬಿ ಗೆಲುವಿನ ಬಗ್ಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಖ್ಯಾತ ಉದ್ಯಮಿ ಹಾಗೂ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಸಮಾಜಿಕ ಜಾಲತಾಣದ ಮೂಲಕ ವಿಶೇಷ ಸಂದೇಶ ಕಳುಹಿಸಿದ್ದಾರೆ.
ವಿರಾಟ್ ಕೊಹ್ಲಿ ಇನ್‌ಸ್ಟಾ ಪೋಸ್ಟ್: ಆರ್‌ಸಿಬಿ ಮಹಿಳಾ ತಂಡದ ಗೆಲುವನ್ನು ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂನ ಖಾತೆಯಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದಾರೆ. ಮತ್ತೆ ಚಾಂಪಿಯನ್‌ಗಳು. "ಆರ್‌ಸಿಬಿ ಧ್ವಜವನ್ನು ಹೆಮ್ಮೆಯಿಂದ ಎತ್ತಿ ಹಿಡಿದಿರುವುದು ನಿಮ್ಮಲ್ಲಿ ಪ್ರತಿಯೊಬ್ಬರೂ ಹೆಮ್ಮೆ ಪಡಬಹುದಾದ ವಿಷಯ. ಸ್ಮೃತಿ ಮಂಧಾನಾ ಹಾಗೂ ಇಡೀ ತಂಡ ಮತ್ತು ನಿರ್ವಹಣಾ ಸಿಬ್ಬಂದಿಗೆ ಈ ಅದ್ಭುತ ಗೆಲುವಿಗಾಗಿ ಹೃತ್ಪೂರ್ವಕ ಅಭಿನಂದನೆಗಳು. ನೀವು ಎಲ್ಲರೂ ಈ ಜಯಕ್ಕೆ ನಿಜವಾಗಿಯೂ ಅರ್ಹರು. ಈ ಕ್ಷಣವನ್ನು ಆನಂದಿಸಿ, ನಮ್ಮ ಅಪ್ಪಟ ಅಭಿಮಾನಿಗಳ ಪ್ರೀತಿಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿ," ಎಂದು ಬರೆದುಕೊಂಡಿದ್ದಾರೆ. ಇನ್ನೂ ಮಾಜಿ ಆರ್‌ಸಿಬಿ ಸ್ಟಾರ್ ಆಟಗಾರ ಎಬಿಡಿ ಆರ್‌ಸಿಬಿ ತಂಡ ಟ್ರೋಫಿ ಎತ್ತಿ ಹಿಡಿದರುವ ಪೋಸ್ಟ್ ಅನ್ನು ಶೇರ್ ಮಾಡಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯ್ ಮಲ್ಯ ಹೇಳಿದ್ದೇನು?: ಡಬ್ಲ್ಯೂಪಿಎಲ್ 2026 ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು. ಆರ್‌ಸಿಬಿ ಚಾಂಪಿಯನ್ ಆಗಿರುವುದು ನಿಜಕ್ಕೂ ಅದ್ಭುತ ಸಾಧನೆ. ಇದು ಶ್ರೇಷ್ಠ ಜಯವಾಗಿದೆ. ಆರ್‌ಸಿಬಿ ಪುರುಷರ ತಂಡವೂ ಈ ಬಾರಿ ಮತ್ತೆ ಟ್ರೋಫಿಯನ್ನು ಎತ್ತಿಹಿಡಿಯಲು ಇದು ದೊಡ್ಡ ಪ್ರೇರಣೆಯಾಗಲಿ ಎಂದು ಟ್ವಿಟರ್‌ನಲ್ಲಿ ಆರ್‌ಸಿಬಿ ಮಾಜಿ ಮಾಲಿಕ ವಿಜಯ್ ಮಲ್ಯ ಅವರು ಬರೆದುಕೊಂಡಿದ್ದಾರೆ.