ವಡೋದರಾ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಆಟದ ಪ್ರದರ್ಶನವನ್ನು ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಐದನೇ ಗೆಲುವು ದಾಖಲಿಸಿದೆ. ಈ ಮೂಲಕ ಸ್ಮೃತಿ ಪಡೆ ಟೂರ್ನಿಯಲ್ಲಿ ಆಡಿದ ಐದೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.
ಬೆಂಗಳೂರು ನೀಡಿದ್ದ 179 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡದ ಆರಂಭ ಕಳಪೆಯಾಗಿತ್ತು. ಇನಿಂಗ್ಸ್‌ನ 2ನೇ ಓವರ್ ಬೌಲ್ ಮಾಡಿದ ಸಯಾಲಿ ಸತ್ಗರೆ ಸ್ಪೋಟಕ ಬ್ಯಾಟರ್‌ಗಳಾದ ಬೆತ್ ಮೂನಿ ಹಾಗೂ ಸೋಫಿ ಡಿವೈನ್ ಇಬ್ಬರನ್ನೂ ಒಂದೇ ಓವರ್‌ನಲ್ಲಿ ಔಟ್ ಮಾಡಿ ಅಬ್ಬರಿಸಿದರು. ನಂತರ ಬಂದ ಕನಿಕಾ ಅಹುಜಾ ಸಹ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಇವರು ಲಾರೆನ್ ಬೆಲ್ ಎಸೆತದಲ್ಲಿ ಬೋಲ್ಡ್ ಆದರು.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅನುಷ್ಕಾ ಶರ್ಮಾ ದೊಡ್ಡ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ ಇವರ ಆಟ 18 ರನ್‌ಗಳಿಗೆ ಕೊನೆಯಾಯಿತು. ಇವರಿಗೆ ನಾಡಿನ್ ಡಿ ಕ್ಲರ್ಕ್ ಪೆವಿಲಿಯನ್ ಹಾದಿ ತೋರಿಸಿದರು. ಭರವಸೆಯ ಆಟಗಾರ್ತಿ ಕಾಶ್ವಿ ಗೌತಮ್ (4) ಒತ್ತಡವನ್ನು ಮೆಟ್ಟಿನಿಂತು ರನ್ ಕಲೆ ಹಾಕುವಲ್ಲಿ ವಿಫಲರಾದರು. ಕೆಳ ಕ್ರಮಾಂಕದಲ್ಲಿ ಭಾರತಿ ಫುಲ್ಮಾಲಿ (14), ತನುಜಾ ಕನ್ವರ್ (11) ಎರಂಡಕಿ ಮುಟ್ಟಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ನಾಯಕಿ ಆಶ್ಲೀ ಗಾರ್ಡ್ನರ್ ಏಕಾಂಗಿ ಹೋರಾಟ ನಡೆಸಿದರು. ಒಂದು ಕಡೆಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ, ಕೆಚ್ಚೆದೆಯಿಂದ ಬ್ಯಾಟ್ ಮಾಡಿದ ಆಶ್ಲೀ ಗಾರ್ಡ್ನರ್ ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಇವರು 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 54 ರನ್ ಸಿಡಿಸಿ ಔಟ್ ಆದರು. ಅಂತಿಮವಾಗಿ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 117 ರನ್ ಸೇರಿಸಿ ಸೋಲು ಕಂಡಿತು. ಆರ್‌ಸಿಬಿ ತಂಡದ ಪರ ಸಯಾಲಿ ಸತ್ಗರೆ 3, ನಾಡಿನ್ ಡಿ ಕ್ಲರ್ಕ್ 2 ವಿಕೆಟ್ ಕಬಳಿಸಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಸಹ ಕಳಪೆಯಾಗಿತ್ತು. ಆರಂಭಿಕ ಗ್ರೇಸ್ ಹ್ಯಾರಿಸ್ ಹಾಗೂ ಜಾರ್ಜಿಯಾ ವೋಲ್ ತಂಡದ ಮೊತ್ತ 9 ಆಗುವಷ್ಟರಲ್ಲಿ ಪೆವಿಲಿಯನ್ ಸೇರಿದರು. ನಾಯಕಿ ಸ್ಮೃತಿ ಮಂಧಾನ 26 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರು ಔಟ್ ಅಗುವ ಮುನ್ನ ಗೌತಮಿ ನಾಯಕ್ ಅವರೊಂದಿಗೆ 45 ಎಸತಗಳಲ್ಲಿ 60 ರನ್ ಜೊತೆಯಾಟದ ಕಾಣಿಕೆ ನೀಡಿತು. 4ನೇ ವಿಕೆಟ್‌ಗೆ ಗೌತಮಿ ನಾಯಕ್ ಸೇರಿಕೊಂಡ ರಿಚಾ ಘೋಷ್ ಜೋಡಿ 69 ರನ್ ಕಾಣಿಕೆ ನೀಡಿತು. ರಿಚಾ 27 ರನ್‌ಗಳಿಗೆ ಆಟ ಮುಗಿಸಿದರು. ಗೌತಮಿ ನಾಯಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 73 ರನ್ ಸಿಡಿಸಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 178 ರನ್ ಸೇರಿಸಿತು.