ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚಾರಣೆಯ ವೇಳೆ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಮ್ಯಾನೇಜ್ಮೆಂಟ್ ದೊಡ್ಡ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಜೂನ್ 4 ರಂದು ಬೆಂಗಳೂರಿನಲ್ಲಿ ನಡೆದ ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮೃತ ಪಟ್ಟವರಿಗೆ ಆರ್‌ಸಿಬಿ ಮ್ಯಾನೇಜ್ಮೆಂಟ್ 25 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.
ಆರ್‌ಸಿಬಿ ಸುಮಾರು 17 ವರ್ಷಗಳಿಂದ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ 18ನೇ ಆವೃತ್ತಿಯಲ್ಲಿ ಆರ್‌ಸಿಬಿ ರಜತ್ ಪಾಟಿದಾರ್ ಅವರನ್ನು ನಾಯಕರನ್ನಾಗಿ ನೇಮಿಸಿತು. ಇವರ ನಾಯಕತ್ವದಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿ, ಫೈನಲ್ ಪ್ರವೇಶಿಸಿತ್ತು. ಜೂನ್ 3 ರಂದು ನಡೆದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ ಪ್ರಶಸ್ತಿ ಬರವನ್ನು ಕೊನೆಗೊಳಿಸಿತು.

ಆರ್‌ಸಿಬಿ ಟ್ರೋಫಿ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮಟ್ಟಿತ್ತು. ಬೆಂಗಳೂರಿನಲ್ಲೂ ಅಭಿಮಾನಿಗಳು ರಸ್ತೆಗಿಳಿದು ಸಂಭ್ರಮಿಸಿದ್ದರು. ಆರ್‌ಸಿಬಿ ಟ್ರೋಫಿ ಗೆದ್ದ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಆಚರಿಸಲು ಜೂನ್ 4 ರಂದು ಚಿನ್ನಸ್ವಾಮಿ ಅಂಗಳದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದೇ ವೇಳೆ ಅಪಾರ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದತ್ತ ಜಮಾವಣೆ ಆಗಿದ್ದರು. ಇದೇ ವೇಳೆ ಕಾಲ್ತುಳಿತ ಸಂಭವಿಸಿದ್ದು, 11 ಜನರು ಸಾವನ್ನಪ್ಪಿದ್ದರು. ಅಲ್ಲದೆ ಹಲವು ಅಭಿಮಾನಿಗಳು ಗಾಯಕ್ಕೆ ತುತ್ತಾಗಿದ್ದರು.
ಆರ್‌ಸಿಬಿ ತಕ್ಷಣ ಮೃತರ ಕುಟುಂಬಗಳಿಗೆ 10 ಲಕ್ಷ ಪರಿಹಾರವನ್ನು ಘೋಷಿಸಿತು. ಇಷ್ಟೇ ಅಲ್ಲದೆ ಸುಮಾರು 3 ತಿಂಗಳವರೆಗೆ ಸಾಮಾಜಿಕ ತಾಣದಿಂದ ದೂರ ಇಳಿದಿತ್ತು. ಅಲ್ಲದೆ ಶುಕ್ರವಾರ ಮತ್ತೆ ಸಾಮಾಜಿಕ ತಾಣದಲ್ಲಿ ಕಾಣಿಸಿಕೊಂಡ ಆರ್‌ಸಿಬಿ ಕೇರ್ಸ್ ಸದ್ದು ಮಾಡಿತು. ಮೂರು ತಿಂಗಳ ಅವಧಿಯಲ್ಲಿ ಸಾಕಷ್ಟು ವಿಚಾರಗಳನ್ನ ಕಲಿತಿದ್ದೇವೆ. ಹೀಗಾಗಿ ಅಭಿಮಾನಿಗಳ ಸಹಾಯಕ್ಕಾಗಿ ಆರ್‌ಸಿಬಿ ಕೇರ್ಸ್ ಆರಂಭಿಸಿದ್ದಾಗಿ ತಿಳಿಸಿದೆ.