ಟೀಮ್ ಇಂಡಿಯಾ ಮುಖ್ಯ ಕೋಚ್ ಘೋಷಣೆ ವಿಳಂಬಕ್ಕೆ ಕಾರಣವೇನು?; ಇಲ್ಲಿದೆ ಉತ್ತರ
ಭಾರತ ಕ್ರಿಕೆಟ್ ತಂಡವು ಸದ್ಯ ಖಾಯಂ ಮುಖ್ಯ ಕೋಚ್ ಇಲ್ಲದೆ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಅಧಿಕಾರವಧಿಯು 2024ರ 20 ವಿಶ್ವಕಪ್ ಪಂದ್ಯಾವಳಿಯ ಮುಕ್ತಾಯದೊಂದಿಗೆ ಕೊನೆಗೊಂಡಿತು.
ಎರಡನೇ ಶ್ರೇಣಿಯ ಭಾರತೀಯ ತಂಡವು 5-ಪಂದ್ಯಗಳ ಟಿ20 ಸರಣಿಗಾಗಿ ಜಿಂಬಾಬ್ವೆಗೆ ಪ್ರಯಾಣಿಸಿದೆ. ಇದೇ ವೇಳೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಖಾಲಿ ಇರುವ ಮುಖ್ಯ ಕೋಚ್ ಪಾತ್ರವನ್ನು ತಾತ್ಕಾಲಿಕವಾಗಿ ತುಂಬಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಇಬ್ಬರು ಅಭ್ಯರ್ಥಿಗಳನ್ನು ಸಂದರ್ಶಿಸಿದ್ದು, ಗೌತಮ್ ಗಂಭೀರ್ ಅಥವಾ ಡಬ್ಲ್ಯುವಿ ರಾಮನ್ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ.
ಆದರೆ, ಘೋಷಣೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಇನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊಸ ಕೋಚ್‌ಗೆ ಉಸ್ತುವಾರಿ ವಹಿಸಲಾಗುವುದು ಎಂದು ಈಗಾಗಲೇ ಖಚಿತಪಡಿಸಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಮುಖ್ಯ ಕೋಚ್ ಹುದ್ದೆಗಾಗಿ ಗೌತಮ್ ಗಂಭೀರ್ ಮತ್ತು ಬಿಸಿಸಿಐ ನಡುವೆ ನಡೆಯುತ್ತಿರುವ 'ಸಂಬಳದ ಮಾತುಕತೆ'ಯಿಂದಾಗಿ ಅಧಿಕೃತ ಘೋಷಣೆಯಲ್ಲಿ ವಿಳಂಬವಾಗಿದೆ.

ರಾಹುಲ್ ದ್ರಾವಿಡ್ ಜೊತೆಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಸೇರಿದಂತೆ ಅವರ ಸಿಬ್ಬಂದಿಯ ಕೋಚಿಂಗ್ ಅವಧಿ ಕೂಡ ಮುಕ್ತಾಯಗೊಂಡಿದೆ.
ಗೌತಮ್ ಗಂಭೀರ್ ಅವರ ನೇಮಕಾತಿ ಅಧಿಕೃತವಾದ ಬಳಿಕ, ಬಿಸಿಸಿಐ ಇತರ ಕೋಚ್‌ಗಳನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಬೇಕಾಗುತ್ತದೆ.
ಸಹಾಯಕ ಕೋಚಿಂಗ್ ಸಿಬ್ಬಂದಿ ಆಯ್ಕೆಗೆ ಸಂಬಂಧಿಸಿದಂತೆ ಗೌತಮ್ ಗಂಭೀರ್‌ಗೆ ಸಂಪೂರ್ಣ ಮುಕ್ತ ಅಧಿಕಾರವನ್ನು ನೀಡಲು ಬಿಸಿಸಿಐ ಯೋಜಿಸಿದೆ ಎಂದು ವರದಿಯಾಗಿದೆ.
ಗೌತಮ್ ಗಂಭೀರ್ ತಮ್ಮ ಆಟದ ದಿನಗಳಲ್ಲಿ ಅತ್ಯುತ್ತಮ ಆರಂಭಿಕ ಬ್ಯಾಟರ್ ಆಗಿದ್ದರಿಂದ, ಪ್ರತ್ಯೇಕ ಬ್ಯಾಟಿಂಗ್ ತರಬೇತುದಾರರನ್ನು ನೇಮಿಸಿಕೊಳ್ಳುವುದಿಲ್ಲ ಎನ್ನಲಾಗಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಹಿಂದೆ ಹೇಳಿದಂತೆ, "ಕೋಚ್ ಮತ್ತು ಆಯ್ಕೆಗಾರರ ನೇಮಕವನ್ನು ಶೀಘ್ರದಲ್ಲೇ ಮಾಡಲಾಗುತ್ತದೆ. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸಂದರ್ಶಿಸಿ ಎರಡು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಮತ್ತು ಮುಂಬೈ ತಲುಪಿದ ನಂತರ ಅವರು ಏನು ನಿರ್ಧರಿಸಿದ್ದಾರೆಯೋ ಅದರಂತೆ ನಾವು ಹೋಗುತ್ತೇವೆ. ವಿವಿಎಸ್ ಲಕ್ಷ್ಮಣ್ ಜಿಂಬಾಬ್ವೆಗೆ ಹೋಗುತ್ತಿದ್ದಾರೆ. ಆದರೆ ಶ್ರೀಲಂಕಾ ಸರಣಿಯಿಂದ ಹೊಸ ಕೋಚ್ ಸೇರಿಕೊಳ್ಳಲಿದ್ದಾರೆ," ಎಂದು ತಿಳಿಸಿದ್ದರು.
ಭಾರತ ಕ್ರಿಕೆಟ್ ತಂಡವು ಜುಲೈ 27ರಿಂದ ಮೂರು ಟಿ20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications