
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಗೆಲುವನ್ನು ಸಾಧಿಸಿ ಟೂರ್ನಿಯಲ್ಲಿ ಸತತ ಎರಡನೇ ವಿಜಯವನ್ನು ತನ್ನದಾಗಿಸಿಕೊಂಡಿದೆ. ಆರಂಭದ ಎರಡು ಪಂದ್ಯಗಳಲ್ಲಿ ಸೋತು ಮುಖಭಂಗ ಅನುಭವಿಸಿದ್ದ ವಾರ್ನರ್ ಪಡೆ ಅದ್ಭುತ ಪ್ರದರ್ಶನದ ಮೂಲಕ ತಿರುಗಿ ಬಿದ್ದಿದೆ. ಸಿಎಸ್‌ಕೆ ವಿರುದ್ಧದ ಗೆಲುವಿನ ಬಳಿಕ ಡೇವಿಡ್ ವಾರ್ನರ್ ಯುವ ಆಟಗಾರರ ಪ್ರದರ್ಶನವನ್ನು ಕೊಂಡಾಡಿದ್ದಾರೆ.
ಸನ್‌ರೈಸರ್ಸ್ ತಂಡದ ಪರವಾಗಿ ಬ್ಯಾಟಿಂಗ್‌ನಲ್ಲಿ ಪ್ರಿಯಮ್ ಗರ್ಗ್ ಹಾಗೂ ಅಭಿಷೇಕ್ ಶರ್ಮಾ ಅದ್ಭುತ ಬ್ಯಾಟಿಂಗ್ ನಡೆಸಿದರು. ಇದರ ಫಲವಾಗಿ ಹೈದರಾಬಾದ್ ತಂಡ 164 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು. ಈ ಪ್ರದರ್ಶನಕ್ಕೆ ಡೇವಿಡ್ ವಾರ್ನರ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
'ನಿನ್ನೆಯ ಪಂದ್ಯ ಸ್ವಲ್ಪ ಸವಾಲಿನದ್ದಾಗಿತ್ತು. ಪಿಚ್ ಹೆಚ್ಚಿನ ತಿರುವು ಪಡೆದುಕೊಳ್ಳುತ್ತಿತ್ತು. ಇದು ಉತ್ತಮವಾಗಿ ಕಾಣಿಸುತ್ತಿತ್ತು. ಹೀಗಾಗಿ ಯುವ ಆಟಗಾರರಿಗೆ ಸಂದೇಶವನ್ನು ರವಾನಿಸಿದೆ. ಕ್ರೀಸ್ ಬಿಟ್ಟು ಮುನ್ನುಗ್ಗಿ ಬಾರಿಸಿ ಹಾಗೂ ಹೆಚ್ಚಿನ ರನ್ ಗಳಿಸಿ ಎಂದು. ಅದರಲ್ಲಿ ಯುವ ಆಟಗಾರರು ಯಶಸ್ವಿಯಾದರು' ಎಂದು ಡೇವಿಡ್ ವಾರ್ನರ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಇನ್ನಿಂಗ್ಸ್‌ನ ಕೊನೆಯ ಓವರ್‌ಅನ್ನು ಯುವ ಸ್ಪಿನ್ನರ್ ಸಮದ್‌ಗೆ ನೀಡಿದ ಬಗ್ಗೆಯೂ ಸಾಕಷ್ಟು ಮಾತುಗಳು ಕೇಳಿ ಬಂದಿತ್ತು, ಈ ಬಗ್ಗೆ ವಾರ್ನರ್ ಪ್ರತಿಕ್ರಿಯಿಸಿದ್ದರು. ನನಗೆ ಬೇರೆ ಆಯ್ಕೆಯೇ ಇರಲಿಲ್ಲ. ನಾನು ಆತನ ಬೆಂಬಲಕ್ಕೆ ನಿಂತಿದ್ದೆ. 19ನೇ ಓವರ್‌ನಲ್ಲೇ ಪಂದ್ಯವನ್ನು ಬದಲಾಯಿಸಲು ಪ್ರಯತ್ನಿಸಿದೆವು. ಹಾಗಾಗಿ ಅಲ್ಲಿ ಅಭಿಷೇಕ್ ಶರ್ಮಾ ಬೌಲಿಂಗ್ ಮಾಡಿದರು. ಸಮದ್ ಕೊನೆಯ ಓವರ್ ಎಸೆಯಲು ಅರ್ಹರಾಗಿದ್ದರು ಎಂದು ವಾರ್ನರ್ ಹೇಳಿಕೆಯನ್ನು ನೀಡಿದ್ದಾರೆ.
ಈ ಎಲ್ಲಾ ಆಟಗಾರರು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು ಹಾಗೂ ಅದ್ಭುತವಾಗಿ ಪ್ರದರ್ಶನ ನೀಡಿದರು. ಹಾಗಾಗಿ ನಿಜವಾಗಿಯೂ ಅವರ ಬಗ್ಗೆ ಹೆಮ್ಮೆಯೆನಿಸುತ್ತಿದೆ. ತುಂಬಾ ಕಠಿಣ ಪರಿಶ್ರಮವನ್ನು ಹಾಕಿದ್ದಾರೆ. ತಮ್ಮ ಯೋಜನೆಗಳನ್ನು ಚೆನ್ನಾಗಿ ಕಾರ್ಯಗತಗೊಳಿಸಿದ್ದಾರೆ. ಇದೇ ನಾವು ಅಂತಿಮವಾಗಿ ಪಡೆದುಕೊಂಡ ಪ್ರತಿಫಲ. ಮುಂದಿನ ದಿನಗಳಲ್ಲೂ ಈ ಪ್ರದರ್ಶನ ಮುಂದುವರಿಯಲಿದೆ ಎಂದು ಆಶಾಭಾವನೆ ಹೊಂದಿದ್ದೇನೆ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.