WPL 2025: ಹಾಲಿ ಚಾಂಪಿಯನ್ ಆರ್‌ಸಿಬಿ ಟೂರ್ನಿಯಿಂದ ಹೊರನಡೆಯಲು ಕಾರಣಗಳು
ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯೂಪಿಎಲ್) 2025ರ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು. ಈ ಸೋಲಿನೊಂದಿಗೆ ಮುಂಬೈ ತಂಡದ ಫೈನಲ್ ತಲುಪುವ ಕನಸು ಭಗ್ನವಾಯಿತು. ಮುಂಬೈ ತಂಡವು ಮೊದಲ ಸ್ಥಾನವನ್ನು ತಲುಪಲು ಸಾಧ್ಯವಾಗಲಿಲ್ಲ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಈಗ, ಮುಂಬೈ ಎಲಿಮಿನೇಟರ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ವಿರುದ್ಧ ಆಡಬೇಕಾಗಿದೆ. ಮೊದಲ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ಪ್ರವೇಶಿಸಿದೆ.
ಹಾಲಿ ಚಾಂಪಿಯನ್ ಆರ್‌ಸಿಬಿ ವನಿತೆಯರ ತಂಡ ಡಬ್ಲ್ಯೂಪಿಎಲ್ 2025ರಲ್ಲಿ ಪಟ್ಟ ಉಳಿಸಿಕೊಳ್ಳುವ ಲೆಕ್ಕಚಾರದಲ್ಲಿತ್ತು. ಆದರೆ, ಆರ್‌ಸಿಬಿ ತಂಡ ಮಾಡಿದ ಕೆಲವು ತಪ್ಪುಗಳಿಂದ ಟೂರ್ನಿಯಿಂದ ಹೊರಬೀಳಬೇಕಾಯಿತು. ಆರ್‌ಸಿಬಿ ಟೂರ್ನಿಯಿಂದ ಹೊರನಡೆಯಲು ಪ್ರಮುಖ ಕಾರಣಗಳ ಬಗ್ಗೆ ಇಲ್ಲಿದೆ ಮಾಹಿತಿ.

ತಪ್ಪು ನಿರ್ಧಾರ
ಡಬ್ಲ್ಯುಪಿಎಲ್ 2025ರಲ್ಲಿ ಆರ್‌ಸಿಬಿ ಮತ್ತು ಯುಪಿ ವಾರಿಯರ್ಸ್ ನಡುವೆ ಮೊದಲ ಸೂಪರ್ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 180 ರನ್‌ಗಳ ಗುರಿಯನ್ನು ಯುಪಿ ವಾರಿಯರ್ಸ್ ತಂಡಕ್ಕೆ ನೀಡಿತು. ಯುಪಿ ಕೂಡ 180 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು. ಸೂಪರ್ ಓವರ್‌ಗೆ ಹೋದ ಪಂದ್ಯದಲ್ಲಿ ಆರ್‌ಸಿಬಿ ದೊಡ್ಡ ತಪ್ಪು ಮಾಡಿತ್ತು. ಸ್ಪೋಟಕ ಬ್ಯಾಟರ್ ಎಲ್ಲಿಸ್ ಪೆರ್ರಿ ಅವರನ್ನು ಕಣಕ್ಕಿಳಿಸಲಿಲ್ಲ. ಬದಲಿಗೆ ನಾಯಕಿ ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಈ ತಪ್ಪು ನಿರ್ಧಾರದಿಂದ ಸೂಪರ್ ಓವರ್‌ನಲ್ಲಿ ಯುಪಿ ನೀಡಿದ 9 ರನ್‌ಗಳ ಗೆಲುವಿನ ಗುರಿಯನ್ನು ಆರ್‌ಸಿಬಿ ಬೆನ್ನಟ್ಟುವಲ್ಲಿ ವಿಫಲವಾಗಿ ಗೆಲ್ಲೋ ಪಂದ್ಯವನ್ನು ಸೋಲಬೇಕಾಯಿತು.
ಕೆಲಸಕ್ಕೆ ಬಾರದ ಸ್ಟಾರ್ ಗಿರಿ
ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೆಯಿದೆ. ಆದರೆ ಕೆಲವು ಸ್ಟಾರ್ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ನಾಯಕಿ ಸ್ಮೃತಿ ಮಂಧಾನ ಎರಡು ಪಂದ್ಯಗಳಲ್ಲಿ ಅಬ್ಬರಿಸಿದ್ದು ಬಿಟ್ಟರೆ, ತಂಡಕ್ಕೆ ನೆರವಾಗುವಂತಹ ಬಿಗ್ ಇನ್ನಿಂಗ್ಸ್ ಆಡಲಿಲ್ಲ. ಹೀಗಾಗಿ ಆರ್‌ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ಹಿಂದೆ ಉಳಿಯಿತು. ಇದು ಕೂಡ ಆರ್‌ಸಿಬಿ ಟೂರ್ನಿಯಿಂದ ಹೊರಬೀಳಲು ಪ್ರಮುಖ ಕಾರಣ.
ಗಾಯದ ಭಯ
ಡಬ್ಲ್ಯೂಪಿಎಲ್ 2025ರಲ್ಲಿ ಆರ್‌ಸಿಬಿ ಚಾಂಪಿಯನ್ ಆಟವನ್ನು ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಗಾಯಗೊಂಡು ಆರ್‌ಸಿಬಿ ತಂಡದಿಂದ ಹೊರಗುಳಿದ ಸ್ಟಾರ್ ಆಟಗಾರರು. ಇದು ತಂಡದ ಸಮತೋಲನವನ್ನು ಸಂಪೂರ್ನ ಹಾಳು ಮಾಡಿತು.ಆರ್‌ಸಿಬಿ ತಂಡದ ಸ್ಟಾರ್ ಆಟಗಾರರಾದ ಸೋಫಿ ಡಿವೈನ್ ವಿರಾಮ ತೆಗೆದುಕೊಂಡರೆ, ಸೋಫಿ ಮೊಲಿನೆಕ್ಸ್, ಕೇಟ್ ಕ್ರಾಸ್, ಆಶಾ ಸೋಭಾನ ಮತ್ತು ಶ್ರೇಯಾಂಕ ಪಾಟೀಲ್ ಗಾಯಗಳಿಂದ ಟೂರ್ನಿಯಲ್ಲಿ ಆಡಲು ಸಾಧ್ಯವಾಗಲಿಲ್ಲ.
ಕೈ ಹಿಡಿಯದ ಸ್ಪಿನ್ನರ್ಸ್
ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ ಅಸ್ತ್ರಗಳನ್ನು ಡಬ್ಲ್ಯೂಪಿಎಲ್ 2025ರಲ್ಲಿ ಕಳೆದುಕೊಂಡಿತು. ಸೋಫಿ ಮೊಲಿನೆಕ್ಸ್, ಆಶಾ ಸೋಭಾನ ಮತ್ತು ಶ್ರೇಯಾಂಕ ಪಾಟೀಲ್ ಗಾಯದ ಕಾರಣ ತಂಡದ ಪರ ಆಡಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ಈ ಮೂವರು ಸ್ಪಿನ್ನರ್ಸ್ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಬಾರಿ ಇಂತಹ ಟಾಪ್ ಸ್ಪಿನ್ನರ್ಸ್ ಇಲ್ಲದ ಕಾರಣ ಆರ್‌ಸಿಬಿ ಸೋಲಿಗೆ ಕಾರಣವಾಯಿತು.
ಉತ್ತರನ ಪೌರುಷ
ಡಬ್ಲ್ಯೂಪಿಎಲ್ 2025ರಲ್ಲಿ ಆರ್‌ಸಿಬಿ ಸತತ ಎರಡು ಗೆಲುವಿನೊಂದಿಗೆ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿತ್ತು. ಇದಾದ ನಂತರ ತವರು ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಸತತವಾಗಿ 4 ಪಂದ್ಯಗಳಲ್ಲಿ ಸೋಲು ಕಾಣಬೇಕಾಯಿತು. ತವರಿನ ಮೈದಾನದ ಲಾಭವನ್ನು ಪಡೆಯದ ಆರ್‌ಸಿಬಿ ಹೀನಾಯವಾಗಿ ಪಂದ್ಯಗಳನ್ನು ಕೈಚೆಲ್ಲಿತ್ತು. ಇದು ಅಂಕಪಟ್ಟಿಯಲ್ಲಿ ಆರ್‌ಸಿಬಿ ತಂಡವನ್ನು ಕೆಳಗಿಳಿಯುವಂತೆ ಮಾಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications