ವಿಶಾಖಪಟ್ಟಣಂನಲ್ಲಿ ಆಸ್ಟ್ರೇಲಿಯಾ ವನಿತೆಯರು ಇತಿಹಾಸ ನಿರ್ಮಿಸಿದ್ದಾರೆ. ಭಾರತ ನೀಡಿದ್ದ 331 ರನ್‌ಗಳ ಗುರಿಯನ್ನು ಇನ್ನು 3 ವಿಕೆಟ್ ಇರುವಂತೆ ಚೇಸ್ ಮಾಡಿದ ಆಸೀಸ್ ದಾಖಲೆ ಬರೆದಿದೆ. ಪ್ರಸಕ್ತ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಎಲ್ಲರ ಚಿತ್ತ ಕದ್ದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಪ್ರದರ್ಶನ ನೀಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಆ ಬಗ್ಗೆ ವರದಿ ಇಲ್ಲಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 330 ರನ್‌ಗಳಿಗೆ ಆಲೌಟ್ ಆಯಿತು. ಅರಂಭಿಕರಾದ ಸ್ಮೃತಿ ಮಂಧಾನ, ಪ್ರತಿಕಾ ರಾವಲ್ ಅರ್ಧಶತಕದ ಜೊತೆಯಾಟವನ್ನು ನೀಡಿದರು. ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಪರ ನಾಯಕಿ ಅಲಿಸಾ ಹೀಲಿ ಭರ್ಜರಿ ಶತಕ ಸಿಡಿಸಿ ಗೆಲುವಿನಲ್ಲಿ ಮಿಂಚಿದರು. ಆಸ್ಟ್ರೇಲಿಯಾ ದಾಖಲೆಯ ಮೊತ್ತವನ್ನು ಇನ್ನು 6 ಎಸೆತ ಬಾಕಿ ಇರುವಂತೆ ಗುರಿ ಮುಟ್ಟಿ ಸಂಭ್ರಮಿಸಿತು. ಈ ಪಂದ್ಯದಲ್ಲಿ ದಾಖಲಾದ ದಾಖಲೆಗಳ ಪಟ್ಟಿ ಇಲ್ಲಿದೆ.

331- ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು ಚೇಸ್ ಮಾಡಿದ ಗರಿಷ್ಠ ರನ್ ಆಗಿದೆ. ಭಾನುವಾರ ಈ ಮೊತ್ತವನ್ನು ಆಸ್ಟ್ರೇಲಿಯಾ ಬೆನ್ನಟ್ಟಿ ಇತಿಹಾಸ ನಿರ್ಮಿಸಿದೆ. ಇದಕ್ಕೂ ಮೊದಲು ಶ್ರೀಲಂಕಾ, ದಕ್ಷಿಣ ಆಫ್ರಿಕಾ ವಿರುದ್ಧ 2024ರಲ್ಲಿ 302 ರನ್ ಚೇಸ್ ಮಾಡಿತ್ತು.
142- ನಾಯಕಿಯಾಗಿ ಅಲಿಸಾ ಹೀಲಿ 142 ರನ್ ಕಲೆ ಹಾಕಿದ್ದು, ಮೂರನೇ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮೊದಲು 1997 ರಲ್ಲಿ ಬೆಲಿಂಡಾ ಕ್ಲಾರ್ಕ್ (ಅಜೇಯ 227) ಮತ್ತು 2017ರಲ್ಲಿ ಮೆಗ್ ಲ್ಯಾನಿಂಗ್ (ಅಜೇಯ 152) ದೊಡ್ಡ ಮೊತ್ತವಾಗಿತ್ತು.
661- ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ದಾಖಲಾದ ಎರಡನೇ ಅತಿ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮೊದಲು 2017ರಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ನಡುವಣ ಪಂದ್ಯದಲ್ಲಿ 678 ರನ್ ದಾಖಲಾಗಿದ್ದವು.

82/0- ಏಕದಿ ವಿಶ್ವಕಪ್‌ನ ಪವರ್‌ಪ್ಲೇನಲ್ಲಿ ಒಂದು ತಂಡ ಕಲೆ ಹಾಕಿದ ಗರಿಷ್ಠ ರನ್ ಆಗಿದೆ.
330- ಭಾರತ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಗಳಿಸಿದ ಅಧಿಕ ಮೊತ್ತವಾಗಿದೆ. ಇದಕ್ಕೂ ಮೊದಲು ಭಾರತ 2022ರಲ್ಲಿ ವಿಂಡೀಸ್ ವಿರುದ್ಧ 7 ವಿಕೆಟ್‌ಗೆ 318 ರನ್ ಕಲೆ ಹಾಕಿತ್ತು.
5022- ಏಕದಿನ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ 5 ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ ಭಾರತದ ಎರಡನೇ ಹಾಗೂ ವಿಶ್ವದ ಐದನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಪಾತ್ರರಾಗಿದ್ದಾರೆ. ಇವರು 112 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
1062- ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಸ್ಮೃತಿ ಮಂಧನಾ ಏಕದಿನ ಮಹಿಳಾ ಕ್ರಿಕೆಟ್‌ನಲ್ಲಿ ದಾಖಲಿಸಿದ ರನ್.
5- ಆಸ್ಟ್ರೇಲಿಯಾ ವಿರುದ್ಧ ಸ್ಮೃತಿ ಮಂಧನಾ ಬ್ಯಾಕ್ ಟು ಬ್ಯಾಕ್ 5 ಅರ್ಧಶತಕಗಳನ್ನು ಬಾರಿಸಿ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದಿದ್ದಾರೆ.
155- ಪ್ರತಿಕಾ ರಾವಲ್ ಹಾಗೂ ಸ್ಮೃತಿ ಮಂಧಾನ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ವಿಕೆಟ್‌ಗೆ ಕಲೆ ಹಾಕಿದ 155 ರನ್ ಗರಿಷ್ಠ ಜೊತೆಯಾಟವಾಗಿದೆ.