ಕ್ರಿಕೆಟ್ ಅಂಗಳದಲ್ಲಿ ಅದೆಷ್ಟೋ ದಾಖಲೆಗಳು ಪ್ರತಿ ವರ್ಷ ನಿರ್ಮಾಣವಾಗುತ್ತವೆ. ಇನ್ನು ಹಲವು ದಾಖಲೆಗಳು ಕ್ರಿಕೆಟ್ ಇತಿಹಾಸದ ಪುಸ್ತಕ ಸೇರುತ್ತವೆ. ವಿಶ್ವದ ಸ್ಟಾರ್ ಆಟಗಾರರು ಮೈದಾನಕ್ಕೆ ಇಳಿದರೆ ದಾಖಲೆಗಳ ಪುಟ ಸೇರುತ್ತಾರೆ. ಇನ್ನು ಹಲವು ಯುವ ಆಟಗಾರರು ದಾಖಲೆಯ ಬೆನ್ನು ಹತ್ತಿರುತ್ತಾರೆ. ಅಸಲಿಗೆ ದಾಖಲೆಗಳು ಇರುವುದೇ ಅಳಿಸಲು ಅನ್ನೋದು ಸುಳ್ಳಲ್ಲ.
ಪ್ರತಿ ವರ್ಷ ಆರಂಭವಾದರೆ ಸಾಕು ದಾಖಲೆಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಈ ವರ್ಷ ಇಷ್ಟು ದಾಖಲೆಗಳನ್ನು ಆಟಗಾರ ಮುರಿಯಬಹುದು ಎಂಬ ಲೆಕ್ಕಾಚಾರ ಆರಂಭವಾಗುತ್ತವೆ. 2024ರಲ್ಲಿ ದಾಖಲೆಯ ಪುಟ ಸೇರಬಹುದಾದ ಐದು ದಾಖಲೆಗಳ ಬಗ್ಗೆ ಪರಿಚಯ ಇಲ್ಲಿದೆ. ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅವರ ದಾಖಲೆಯೂ ಅಪಾಯದಲ್ಲಿದೆ.

ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಇತ್ತೀಚಿನ ದಿನಗಳಲ್ಲಿ ಫಾರ್ಮ್ ಇಲ್ಲದೆ ಬಳಲುತ್ತಿದ್ದಾರೆ. 2023ರ ಕಹಿ ಘಟನೆಗಳನ್ನು ಮರೆತು ಬಾಬರ್ 2024ರಲ್ಲಿ ಅತಿ ಉತ್ಸಾಹದಿಂದ ಮೈದಾನಕ್ಕೆ ಇಳಿದಿದ್ದಾರೆ. ಈ ಬಾರಿ ಬಾಬರ್ ದಾಖಲೆಯ ಪುಟದಲ್ಲಿ ತಮ್ಮ ಹೆಸರನ್ನು ನಮೂದಿಸಬಹುದು.
ಈ ವರ್ಷ ಪಾಕಿಸ್ತಾನ ತಂಡ 25 ಟಿ20 ಪಂದ್ಯಗಳನ್ನು ಆಡಲಿದೆ. ಈ ವೇಳೆ ಉತ್ತಮ ಬ್ಯಾಟಿಂಗ್ ನಡೆಸಿದ್ದೇ ಆದಲ್ಲಿ ಬಾಬರ್ ನಿಶ್ಚಿತವಾಗಿ ವಿರಾಟ್ ಕೊಹ್ಲಿ ದಾಖಲೆಯನ್ನು ಅಳಿಸಿ ಹಾಕಬಹುದು. ಬಾಬರ್ ಆಜಮ್ 104 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3485 ರನ್ ಗಳಿಸಿದ್ದಾರೆ. ಪ್ರಸ್ತುತ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ.
ವಿರಾಟ್ 4008 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ 3853 ರನ್ ಗಳಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾರ್ಟಿನ್ ಗಪ್ಟಿಲ್ 3531 ರನ್ ಗಳಿಸಿದ್ದಾರೆ. ವಿರಾಟ್ ಮತ್ತು ರೋಹಿತ್ ಟಿ20 ಪಂದ್ಯಗಳನ್ನು ಆಡುವುದು ಇನ್ನು ಕಗ್ಗಂಟಾಗಿ ಉಳಿದಿದೆ. ಹೀಗಾಗಿ ಈ ದಾಖಲೆಯನ್ನು ಬರೆಯಲು ಪಾಕ್ ಮಾಜಿ ನಾಯಕನಿಗೆ ಸುವರ್ಣ ಅವಕಾಶ ಇದಾಗಿದೆ.

ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಬಹುದು. ರಶೀದ್ 410 ಟಿ20 ಪಂದ್ಯಗಳಲ್ಲಿ 556 ವಿಕೆಟ್ ಪಡೆದಿದ್ದಾರೆ. ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೊ 564 ಪಂದ್ಯಗಳಲ್ಲಿ 619 ವಿಕೆಟ್‌ಗಳನ್ನು ಪಡೆದಿದ್ದು, ಟಿ20 ಕ್ರಿಕೆಟ್‌ನಲ್ಲಿ ಹೆಚ್ಚಿನ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಬ್ರಾವೋ ಇದೀಗ ಐಪಿಎಲ್‌ನಿಂದಲೂ ನಿವೃತ್ತಿಯಾಗಿದ್ದಾರೆ. ಇದೀಗ ಅವರು ಕೆಲವು ಟಿ20 ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಅಫ್ಘಾನ್ ಲೆಗ್ ಸ್ಪಿನ್ನರ್ ಈ ವರ್ಷ ಐಪಿಎಲ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಆಡುವ ಮೂಲಕ ಬ್ರಾವೋ ಅವರ ದಾಖಲೆಯನ್ನು ಮುರಿಯಬಹುದು.
ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಈ ವರ್ಷ ಟೆಸ್ಟ್‌ನಲ್ಲಿ 700 ವಿಕೆಟ್‌ಗಳನ್ನು ಕಬಳಿಸಬಹುದು. ಅವರು ಈ ಸಾಧನೆ ಮಾಡಿದರೆ ವಿಶ್ವದ ಮೊದಲ ವೇಗದ ಬೌಲರ್ ಆಗಬಹುದು. ಆ್ಯಂಡರ್ಸನ್ 183 ಟಿ20 ಪಂದ್ಯಗಳಲ್ಲಿ 690 ವಿಕೆಟ್ ಪಡೆದಿದ್ದಾರೆ. 700ರ ಗಡಿ ಮುಟ್ಟಲು 10 ವಿಕೆಟ್‌ಗಳ ಅಗತ್ಯವಿದೆ. ಭಾರತ ವಿರುದ್ಧ ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಆಂಡರ್ಸನ್ ಭಾರತದ ವಿರುದ್ಧ ಈ ಸಾಧನೆ ಮಾಡಬಲ್ಲರು. ಭಾರತ ವಿರುದ್ಧದ ಸರಣಿಯಲ್ಲಿ 19 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಅವರು ದಂತಕಥೆ ಶೇನ್ ವಾರ್ನ್ ಅವರನ್ನು ಹಿಂದಿಕ್ಕಲಿದ್ದಾರೆ. ಶೇನ್ ವಾರ್ನ್ ಅವರ ಹೆಸರಿನಲ್ಲಿ 708 ವಿಕೆಟ್‌ಗಳಿವೆ.
ಈ ವರ್ಷ ಟಿ20 ವಿಶ್ವಕಪ್ ಆಯೋಜಿಸಬೇಕಿದೆ. ಭಾರತ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಟ್ರೋಫಿ ಗೆದ್ದಿವೆ. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಹೊಸ ಚಾಂಪಿಯನ್ ಸಿಗಬಹುದು. ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳಿಗೆ ವಿಶ್ವ ಚಾಂಪಿಯನ್ ಆಗುವ ಅವಕಾಶವಿದೆ.

ಪ್ರಸ್ತುತ ODI ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾವು ಒಂದು ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ ಮೂರು ICC ಟ್ರೋಫಿಗಳನ್ನು ವಶಪಡಿಸಿಕೊಳ್ಳುವ ಸುವರ್ಣಾವಕಾಶವನ್ನು ಹೊಂದಿದೆ. ಆಸ್ಟ್ರೇಲಿಯಾ ತಂಡ ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಗೆದ್ದಿತ್ತು. ಈ ವರ್ಷ T20 ವಿಶ್ವಕಪ್ ಗೆಲ್ಲುವ ಮೂಲಕ, ಒಂದೇ ಸಮಯದಲ್ಲಿ ಎಲ್ಲಾ ಮೂರು ICC ಟ್ರೋಫಿಗಳನ್ನು ಗೆದ್ದ ವಿಶ್ವದ ಮೊದಲ ತಂಡವಾಗಿದೆ.