ಕೋಚ್ ಆಯ್ಕೆ ವಿಚಾರದಲ್ಲಿ ಕೊಹ್ಲಿ ಅಭಿಪ್ರಾಯದ ಬಗ್ಗೆ ಮಾತನಾಡಿದ ಕಪಿಲ್

ಹೊಸದಿಲ್ಲಿ, ಆಗಸ್ಟ್ 01: ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಹಾಗೂ ಹಾಲಿ ಕ್ರಿಕೆಟ್ ಸಲಹಾ ಸಮಿತಿಯ ಮುಖ್ಯಸ್ಥ ಕಪಿಲ್ ದೇವ್, ಟೀಮ್ ಇಂಡಿಯಾದ ನೂತನ ಕೋಚ್ ಆಯ್ಕೆ ವಿಚಾರದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರ ಅಭಿಪ್ರಾಯವನ್ನು ಗೌರವಿಸುವುದಾಗಿ ಹೇಳಿದ್ದಾರೆ.
"ಪ್ರತಿಯೊಬ್ಬರ ಅಭಿಪ್ರಾಯವನ್ನೂ ಗೌರವಿಸಬೇಕು. ಕೊಹ್ಲಿ ಅವರ ಅಭಿಪ್ರಾಯವನ್ನೂ ಕೂಡ," ಎಂದು ಇಲ್ಲಿನ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ರವಿ ಶಾಸ್ತ್ರಿ ಅವರೇ ಕೋಚ್ ಸ್ಥಾನದಲ್ಲಿ ಮುಂದುವರಿದರೆ ಸಂತೋಷ ಎಂದು ಹೇಳಿದ್ದ ಕೊಹ್ಲಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಪಿಲ್ ದೇವ್ ಮತ್ತು ಭಾರತ ತಂಡದ ಮಾಜಿ ಆಟಗಾರ ಹಾಗೂ ಕೋಚ್ ಅನ್ಷುಮನ್ ಗಾಯಕ್ವಾಡ್ ಹಾಗೂ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಂತ ರಂಗಸ್ವಾಮಿ ಅವರನ್ನು ಒಳಗೊಂಡ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಗೆ ನೂತನ ಕೋಚ್ ಆಯ್ಕೆ ಜವಾಬ್ದಾರಿಯನ್ನು ಬಿಸಿಸಿಐನ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಒಪ್ಪಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳ ಸಲುವಾಗಿ ಭಾರತ ತಂಡ ವೆಸ್ಟ್ ಇಂಡಿಸ್ ಪ್ರವಾಸ ಕೈಗೊಂಡಿದ್ದೆ. ಇದಕ್ಕೂ ಮುನ್ನ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದ ವಿರಾಟ್, "ರವಿ ಶಾಸ್ತ್ರಿ ಅವರೇ ಕೋಚ್ ಸ್ಥಾನದಲ್ಲಿ ಮುಂದುವರಿದರೆ ಉತ್ತಮ. ಈ ವಿಚಾರವಾಗಿ ಕ್ರಿಕೆಟ್ ಸಲಹಾ ಸಮಿತಿ ನನ್ನ ಅಭಿಪ್ರಾಯ ಬಯಸಿದರೆ ನಾನು ಚರ್ಚೆಯಲ್ಲಿ ಭಾಗಿಯಾಗಲು ಸಿದ್ದ," ಎಂದು ಹೇಳಿದ್ದರು.
ಇದೇ ವೇಳೆ ಕೊಹ್ಲಿ ಪರ ಬ್ಯಾಟ್ ಬೀಸಿದ್ದ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, "ವಿರಾಟ್ ಭಾರತ ತಂಡದ ನಾಯಕ. ತಂಡದ ಕೋಚ್ ಯಾರಾಗಬೇಕು ಎಂಬುದನ್ನು ಕೇಳಿ ಪಡೆಯುವ ಹಕ್ಕು ಅವರಿಗಿದೆ," ಎಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications