ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಹೋರಾಟ ಆರಂಭಿಸಿದೆ. ಈ ಪಂದ್ಯದಲ್ಲಿ ಭಾರತ ತನ್ನ ಆಡುವ ಬಳಗದಲ್ಲಿ ತೆಗೆದುಕೊಂಡ ನಿರ್ಧಾರವೊಂದು ಈಗ ಚರ್ಚೆಗೆ ಕಾರಣವಾಗಿದೆ. ಟೀಮ್ ಇಂಡಿಯಾದ ಅನುಭವಿ ಆಟಗಾರ ವಿಶ್ವದ ನಂಬರ್ 1 ಬೌಲರ್ ಹಾಗೂ ನಂ.2 ಆಲ್‌ರೌಂಡರ್ ಆರ್ ಅಶ್ವಿನ್ ಅವರನ್ನು ಭಾರತ ಆಡುವ ಬಳಗದಿಂದ ಹೊರಗಿಟ್ಟಿರುವುದು ಇದಕ್ಕೆ ಕಾರಣ.
ಟೀಮ್ ಇಂಡಿಯಾದ ಈ ನಿರ್ಧಾರದ ಬಗ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಜೊತೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ದಿಗ್ಗಜ ನಾಯಕ ರಿಕಿ ಪಾಂಟಿಂಗ್ ಕೂಡ ಟೀಮ್ ಇಂಡಿಯಾದ ಈ ನಿರ್ಧಾರವನ್ನು ಟೀಕಿಸಿದ್ದಾರೆ. ಅಲ್ಲದೆ ಭಾರತ ತಂಡದ ಈ ನಿರ್ಧಾರಕ್ಕೆ ಮುಂದೆ ತಾವೇ ಮರುಗಬೇಕಾಗುತ್ತದೆ ಎಂದಿದ್ದಾರೆ ರಿಕಿ ಪಾಂಟಿಂಗ್.

ಪಂದ್ಯದ ಟಾಸ್‌ಗೂ ಮುನ್ನ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಟೀಮ್ ಇಂಡಿಯಾ ಆರ್ ಅಶ್ವಿನ್ ಅವರನ್ನು ಆಡುವ ಬಳಗದಲ್ಲಿ ಖಂಡಿತಾ ಹೊಂದಿರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಪಿಚ್ ಮತ್ತು ವಾತಾವರಣ ಕಾರಣದಿಂದಾಗಿ ಅನಿವಾರ್ಯವಾಗಿ ಆರ್ ಅಶ್ವಿನ್ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿದೆ ಎಂದು ಟಾಸ್ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ವಿವರಿಸಿದರು.
ಟೀಮ್ ಇಂಡಿಯಾ ನಾಯಕನ ಈ ನಿರ್ಧಾರ ಅಭಿಮಾನಿಗಳಲ್ಲಿ ಹಾಗೂ ಕ್ರಿಕೆಟ್ ಪಂಡಿತರಲ್ಲಿ ಅಚ್ಚರಿಕೆ ಕಾರಣವಾಗಿದೆ. ಅದಕ್ಕೆ ಕಾರಣ ಈ ಪಂದ್ಯದ ಕೊನೆಯ ಎರಡು ದಿನಗಳು ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರಲಿದೆ ಎಂದು ವರದಿಯಾಗಿರುವುದು. ಅಲ್ಲದೆ ಅಲ್ಲದೆ ಆಸ್ಟ್ರೇಲಿಯ ತಂಡ ಖವಾಜಾ, ವಾರ್ನರ್, ಟ್ರಾವಿಸ್ ಹೆಡ್‌ರಂಥಾ ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವುದರಿಂದ ಅಶ್ವಿನ್‌ರನ್ನು ಕಣಕ್ಕಿಳಿಸದೇ ಎಡವಟ್ಟು ಮಾಡಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.
ಇನ್ನು ಈ ಪಿಚ್ ವಿಶ್ಲೇಷಣೆ ಮಾಡಿದ ಸ್ಟಾರ್ ಆಟಗಾರ ಡಿವಿಲಿಯರ್ಸ್ ಓವಲ್ ಪಿಚ್ ಬ್ಯಾಟಿಂಗ್ ಗೆ ಅನುಕೂಲವಾಗಲಿದೆ ಎಂದಿದ್ದಾರೆ. ಆದರೆ ಕೊನೆಯ ಎರಡು ದಿನಗಳು ಖಂಡಿತವಾಗಿಯೂ ಸ್ಪಿನ್‌ಗೆ ಅನುಕೂಲಕರವಾಗಲಿದೆ ಎಂದು ಎಬಿ ಡಿವಿಲಿಯರ್ಸ್ ವಿವರಿದ್ದಾರೆ.
ಇನ್ನು ಟೀಮ್ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಳಿಕ ರಿಕಿ ಪಾಂಟಿಂಗ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾ ಹೊಸ ಚೆಂಡಿನಲ್ಲಿ ಆಸ್ಟ್ರೇಲಿಯಾಗೆ ಹಾನಿಯುಂಟು ಮಾಡುತ್ತದೆ. ಆದರೆ ದಿನಕಳೆದಂತೆ ಪಿಚ್ ಸ್ಪಿನ್ನರ್‌ಗಳಿಗೆ ಖಂಡಿತವಾಗಿಯೂ ನೆರವು ನೀಡಲಿದೆ. ಚೆಂಡು ತಿರುಗಲು ಆರಂಭಿಸಿದಾಗ ಆಸ್ಟ್ರೇಲಿಯಾ ಬ್ಯಾಟರ್‌ಗಳ ವಿರುದ್ಧ ಯಶಸ್ಸು ಸಾಧಿಸಬೇಕಾದರೆ ಭಾರತ ತಂಡಕ್ಕೆ ಅಶ್ವಿನ್ ಅವರ ಅಗತ್ಯ ಬಹಳ ಇದೆ. ಆದರೆ ಆಡುವ ಬಳಗದಲ್ಲಿ ಅವರಿಲ್ಲದ ಕಾರಣ ಅವರಿಂದ ಏನನ್ನೂ ಮಾಡಲು ಸಾಧ್ಯವಾಗದು" ಎಂದಿದ್ದಾರೆ ರಿಕಿ ಪಾಂಟಿಂಗ್.
ಪಿಚ್ ಬಗ್ಗೆ ರಿಕಿ ಪಾಂಟಿಂಗ್ ಅವರ ಈ ಅಭಿಪ್ರಾಯ ಭಾರತೀಯ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ. ಯಾಕೆಂದರೆ ಕಳೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪಿನ್‌ಗೆ ನೆರವು ನೀಡದ ಪಿಚ್‌ನಲ್ಲಿಯೂ ಆರ್ ಅಶ್ವಿನ್ ಕಣಕ್ಕಿಳಿದು 4 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಹೀಗಾಗಿ ಈ ಮಹತ್ವದ ಪಂದ್ಯದಲ್ಲಿ ಅಶ್ವಿನ್‌ಗೆ ಅವಕಾಶ ನಿಡಬೇಕಾಗಿತ್ತು ಎಂಬ ಅಭಿಪ್ರಾಯಗಳನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.