ಈ ವರ್ಷದ ಬಹು ನಿರೀಕ್ಷಿತ ಟೆಸ್ಟ್ ಸರಣಿ ಎಂದೇ ಖ್ಯಾತಿ ಪಡೆದಿರುವ ಬಾರ್ಡರ್ ಗವಾಸ್ಕರ್ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಈ ಸರಣಿಯ ಬಗ್ಗೆ ಮಾತುಗಳು ಆರಂಭವಾಗಿವೆ. ಯಾರು ಈ ಸರಣಿಯನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿದೆ. ಈ ಬೆನ್ನಲ್ಲೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.
ಆಸ್ಟ್ರೇಲಿಯಾ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್, ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಗುಣಗಾನ ಮಾಡಿದ್ದಾರೆ. ವಿರಾಟ್ ಟೆಸ್ಟ್‌ನಲ್ಲಿ ಹೊಸ ಕ್ರಾಂತಿಯನ್ನು ತರುವ ಆಟಗಾರ ಎಂದು ಬಣ್ಣಿಸಿದ್ದಾರೆ. ಇಷ್ಟೇ ಅಲ್ಲದೆ ಪಾಂಟಿಂಗ್ ಅವರು ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ದ್ರಾವಿಡ್ ಕೋಚಿಂಗ್‌ನಲ್ಲಿ ಟೀಮ್ ಇಂಡಿಯಾ ಸಾಧನೆಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.

ಸ್ಕೈ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿ ಅವರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ವಿರಾಟ್ ನಾಯಕತ್ವವನ್ನು ವಹಿಸಿಕೊಳ್ಳುವುದರ ಜೊತೆಗೆ ಭಾರತೀಯ ಕ್ರಿಕೆಟ್ ಅನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ, ಭಾರತವು 2018-19ರಲ್ಲಿ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಸೋಲಿಸಿತು. ನಂತರ ಭಾರತವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಮೊದಲ ಏಷ್ಯನ್ ತಂಡವಾಯಿತು. ಕೊಹ್ಲಿಯ ಆಕ್ರಮಣಕಾರಿ ವರ್ತನೆಯು ಇಡೀ ತಂಡಕ್ಕೆ ಸ್ಪೂರ್ತಿ ನೀಡಿದೆ. ಇವರ ಪ್ರದರ್ಶನದ ಫಲವಾಗಿ ವಿದೇಶಿ ಪಿಚ್‌ಗಳಲ್ಲೂ ಭಾರತ ಟೆಸ್ಟ್ ಸರಣಿಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ.
2020-21ರಲ್ಲಿ, ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ್ದಾಗ 2-1 ರಿಂದ ಟೆಸ್ಟ್ ಸರಣಿಯನ್ನು ಗೆದ್ದು ಕೊಂಡಿತ್ತು. ಗಬ್ಬಾ ಅಂಗಳದಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಜಯ ದಾಖಲಿಸಿ ಸರಣಿ ವಶಕ್ಕೆ ಪಡೆದಿತ್ತು.
ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಈಗ ವಿದೇಶಿ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಭಾರತ ತಂಡ ಯಾವುದೇ ಪಿಚ್‌ನಲ್ಲಿ ಅಮೋಘ ಪ್ರದರ್ಶನ ನೀಡಲು ತಯಾರಾಗಿದೆ. ಟೀಮ್ ಇಂಡಿಯಾದ ವೇಗದ ಬೌಲಿಂಗ್ ಸಹ ಕಳೆದ ಆರೇಳು ವರ್ಷದಲ್ಲಿ ತುಂಬ ಸುಧಾರಣೆ ಆಗಿದೆ. ಇದರ ಸಂಪೂರ್ಣ ಕ್ರೆಡಿಟ್ ಆಕ್ರಮಣಕಾರಿ ನಾಯಕತ್ವಕ್ಕೆ ನೀಡಬೇಕು ಎಂದಿದ್ದಾರೆ.