
ಸಿಡ್ನಿ, ಜನವರಿ 27: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಆಡುತ್ತಿದ್ದ ಕಾಲದಲ್ಲಿ ಬೆಸ್ಟ್ ಫೀಲ್ಡರ್‌ಗಳ ಸಾಲಿನಲ್ಲಿ ಪಾಟಿಂಗ್ ಕೂಡ ಒಬ್ಬರಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇ ರಿಕಿ, ವಿಶ್ವದಲ್ಲಿ ತನ್ನ ನೆಚ್ಚಿನ ಫೀಲ್ಡರ್‌ಗಳನ್ನು ಹೆಸರಿಸಿದರೆ ಆ ಪಟ್ಟಿಯಲ್ಲಿ ಯಾವೆಲ್ಲಾ ಹೆಸರುಗಳು ಬಂದಾವು?
ಫೀಲ್ಡರ್‌ಗಳಲ್ಲಿ ಸಾರ್ವಕಾಲಿಕ ಟಾಪ್ 3 ಫೀಲ್ಡರ್‌ಗಳು ಯಾರು ಎಂದು ಟ್ವಿಟರ್‌ನಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಪಾಟಿಂಗ್, ತನ್ನ ಸಹ ಆಟಗಾರ ಆ್ಯಂಡ್ರ್ಯೂ ಸಿಮಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ಆಟಗಾರರಾದ ಎಬಿ ಡಿವಿಲಿಯರ್ಸ್, ಜಾಂಟಿ ರೋಡ್ಸ್ ಅನ್ನು ಹೆಸರಿಸಿದ್ದಾರೆ.
ತಾನು 2012ರಲ್ಲಿ ನಿವೃತ್ತಿ ಘೋಷಿಸಿದ ಬಳಿಕ ಕಾಮೆಂಟರಿ ಮತ್ತು ಕೋಚಿಂಗ್‌ನಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿರುವ ರಿಕಿ ಪಾಟಿಂಗ್ ಸದ್ಯ ಐಪಿಎಲ್ ತಂಡ ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದಿಂದ ಸದ್ಯ ಹೊರಗುಳಿದಿರುವ ರಿಷಬ್ ಪಂತ್ ಬಗ್ಗೆ ರಿಕಿ ಮಾತನಾಡಿದ್ದಾರೆ.
'ರಿಷಬ್ ಪಂತ್ ಒಬ್ಬ ಅಪರಿಮಿತ ಪ್ರತಿಭೆಗಳುಳ್ಳ ಯುವ ಆಟಗಾರ. ಆತ ಟೀಮ್ ಇಂಡಿಯಾಕ್ಕೆ ಅತೀ ಶೀಘ್ರದಲ್ಲೇ ಮರಳಲಿದ್ದಾರೆ,' ಎಂದು ಪಾಂಟಿಂಗ್ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಪಂತ್ ಹೆಲ್ಮೆಟ್‌ಗೆ ಚೆಂಡು ಬಡಿದು ಗಾಯವಾಗಿತ್ತು. ಹೀಗಾಗಿ ಪಂತ್ ಬದಲಿಗೆ ಸದ್ಯ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.