
ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಫೈನಲ್ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಡೆಲ್ಲಿ ತಂಡದ ಅತ್ಯುತ್ತಮ ಆಟ ಇನ್ನಷ್ಟೇ ಬರಬೇಕಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.
ಮಂಗಳವಾರ (ನವೆಂಬರ್ 10) ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕಾದಾಡಲಿವೆ. ಮುಂಬೈ ಒಟ್ಟಿಗೆ ನಾಲ್ಕು ಬಾರಿ ಟ್ರೋಫಿ ಗೆದ್ದಿದ್ದರೆ, ಡೆಲ್ಲಿ ಫೈನಲ್‌ಗೆ ಪ್ರವೇಶಿಸಿರುವುದು ಇದೇ ಮೊದಲು.
ಹಿಂದಿನ ಮೂರು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ವಿರುದ್ಧ ಪಾರಮ್ಯ ಮೆರೆದಿದೆ. ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ದಾಖಲಿಸಿತ್ತು. ಮುಂದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಕಂಡಿತ್ತು. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 57 ರನ್‌ಗಳ ಜಯಭೇರಿ ಬಾರಿಸಿತ್ತು. ಆದರೂ ಡೆಲ್ಲಿಯನ್ನು ಹಗುರವಾಗಿ ಕಾಣಬೇಡಿ ಎಂದು ಪಾಂಟಿಂಗ್ ಹೇಳಿದ್ದಾರೆ.
'ಹಿಂದಿನ ಸೀಸನ್‌ಗಳನ್ನು ಗಮನಿಸಿದರೆ ನಾವು ಖುಷಿಯಾಗಿದ್ದೇವೆ. ಇದು ನಮ್ಮ ಒಳ್ಳೆಯ ಸೀಸನ್. ಆದರೆ ನಾವು ಐಪಿಎಲ್ ಟ್ರೋಫಿ ಗೆಲ್ಲಬೇಕು. ನಾವು ನಮ್ಮ ಬೆಸ್ಟ್ ಹೊಡೆತ ನೀಡುತ್ತೇವೆ. ಹಿಂದೆ ಕೆಲವೊಂದಿಷ್ಟು ಪಂದ್ಯಗಳನ್ನು ಸೋತಿದ್ದೇವೆ, ಅದು ದೊಡ್ಡ ಸಂಗತಿಯಲ್ಲ. ಎಲ್ಲಾ ತಂಡಗಳು ಸೋತಿವೆ-ಗೆದ್ದಿವೆ. ನನಗನ್ನಿಸುತ್ತದೆ, ನಮ್ಮ ಬೆಸ್ಟ್ ಆಟ ಇನ್ನಷ್ಟೇ ಬರಬೇಕಿದೆ,' ಎಂದು ಪಾಂಟಿಂಗ್ ಹೇಳಿದ್ದಾರೆ.