ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ಭರವಸೆಯ ಮೂಡಿಸಿದ ಆಟಗಾರರ ಪಟ್ಟಿಯನ್ನು ಒಮ್ಮೆ ಕಣ್ಣಾಯಿಸಿದರೆ, ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಪ್ಲೇಯರ್ ರಿಂಕು ಸಿಂಗ್. ಸಿಕ್ಕ ಅವಕಾಶವನ್ನೇ ಬಳಸಿಕೊಂಡು ಭರವಸೆಯನ್ನು ಮೂಡಿಸಿರುವ ಆಟಗಾರ.
ಐಪಿಎಲ್ ಆಡಲು ಅವಕಾಶ ಸಿಕ್ಕ ಮೊದಲ ವರ್ಷದಲ್ಲೇ ಭರವಸೆ ಮೂಡಿಸಿದ ಪ್ಲೇಯರ್.
ಕೆಕೆಆರ್ ಪರ ಅದ್ಭುತ ಇನ್ನಿಂಗ್ಸ್ ಆಡಿದ ಅವರು ಇದಾದ ಬಳಿಕ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಾಗ ಅದನ್ನೇ ಸದುಪಯೋಗಪಡಿಸಿಕೊಂಡರು. ರಿಂಕು ಸಿಂಗ್ ಭಾರತ ತಂಡದ ಹೊಸ ಫಿನಿಶರ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ವರ್ಷವೂ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ತಂಡದ ಸ್ಟಾರ್ ಆಟಗಾರರು ತಂಡಕ್ಕೆ ಮರಳಿದಾಗ, ಅವರ ಸ್ಥಾನವನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಪ್ರಮುಖ ಪ್ರಶ್ನೆಯಾಗಿದೆ. ಈ ನಡುವೆ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ರಿಂಕು ಸಿಂಗ್ ಬಗ್ಗೆ ದೊಡ್ಡ ಮಾತು ಹೇಳಿದ್ದಾರೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿರುವ ಟಿ20 ಸರಣಿಗೂ ರಿಂಕು ಸಿಂಗ್ ಆಯ್ಕೆಯಾಗಿದ್ದಾರೆ. ಆಡುವ ಹನ್ನೊಂದರಲ್ಲಿ ಅವಕಾಶ ಸಿಗುತ್ತದೋ ಇಲ್ಲವೋ ಎಂಬುದು ಬೇರೆ ವಿಚಾರ. ಇದು ನಾಯಕ ರೋಹಿತ್ ಶರ್ಮಾ ಟಾಸ್ ಗೆ ಬಂದಾಗ ಮಾತ್ರ ಗೊತ್ತಾಗಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಿಂಕು ಶುಭಾರಂಭ ಮಾಡಿದ್ದಾರೆ. ಅವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ನಾವು ಅವರಿಗೆ ಫಿನಿಶರ್ ಪಾತ್ರವನ್ನು ನೀಡಿದ್ದೇವೆ. ಅವರು ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ರಿಂಕು ಮುಂದೆ ಸಾಗಲು ಇದು ಮತ್ತೊಂದು ಅವಕಾಶ. ಇದರ ನಂತರ, ಟಿ20 ವಿಶ್ವಕಪ್‌ನ ಆಟಗಾರರಲ್ಲಿ ರಿಂಕು ಸ್ಥಾನದ ಬಗ್ಗೆ, ನಿರ್ಧಾರ ತೆಗೆದುಕೊಳ್ಳಲಾಗುವುದು. ಆಟಗಾರರು ಉತ್ತಮ ಪ್ರದರ್ಶನ ನೀಡಿದಾಗ ಅದು ಆಯ್ಕೆದಾರರ ಮನಸ್ಸಿನಲ್ಲಿ ಯಾವಾಗಲೂ ಉಳಿಯುತ್ತದೆ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ರಿಂಕು ಸಿಂಗ್ ಅವರ ಈವರೆಗಿನ ಪ್ರದರ್ಶನದ ಸ್ಥಿರವಾಗಿದೆ. ಅವರು ಇಲ್ಲಿಯವರೆಗೆ 12 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರ ಹೆಸರಿನಲ್ಲಿ 262 ರನ್‌ಗಳಿವೆ. ಟಿ20 ಸ್ವರೂಪದಲ್ಲಿ ಅವರ ಸರಾಸರಿ 65.50 ಮತ್ತು ಸ್ಟ್ರೈಕ್ ರೇಟ್ 180.68 ಆಗಿದೆ. ಅಜೇಯ 68 ರನ್‌ಗಳ ಬಿಗ್ ಇನ್ನಿಂಗ್ಸ್ ಕಟ್ಟಿ ತಮ್ಮ ಕ್ಷಮತೆಯನ್ನು ಸಾಬೀತು ಮಾಡಿದ್ದಾರೆ.
ಭಾರತಕ್ಕಾಗಿ ಎರಡು ODIಗಳನ್ನು ಆಡಿದ್ದು, 55 ರನ್ ಗಳಿಸಿದ್ದಾರೆ. ಈ ರೀತಿ ನೋಡಿದರೆ, ರಿಂಕು ಅಫ್ಘಾನಿಸ್ತಾನ ವಿರುದ್ಧದ ಎಲ್ಲಾ ಮೂರು ಪಂದ್ಯಗಳಲ್ಲಿ ಆಡುವ ಹನ್ನೊಂದರಲ್ಲಿ ಅವಕಾಶ ಪಡೆಯಬಹುದು. 2024 ರ ಟಿ 20 ವಿಶ್ವಕಪ್ ತಂಡದಲ್ಲಿ ಅವರನ್ನು ಸೇರಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.
ಈ ಸರಣಿಯ ನಂತರ ಐಪಿಎಲ್ 2024ರ ಸೀಸನ್ ಕೂಡ ಮಾರ್ಚ್ ಅಂತ್ಯದಿಂದ ಆರಂಭವಾಗಲಿದೆ. ಅಲ್ಲಿ ಅವರು ಮತ್ತೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವುದನ್ನು ಕಾಣಬಹುದು. ರಿಂಕು ಐಪಿಎಲ್‌ನಲ್ಲಿ 31 ಪಂದ್ಯಗಳಲ್ಲಿ 725 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ನಾಲ್ಕು ಅರ್ಧಶತಕಗಳಿವೆ. ಅವರು ಇಲ್ಲಿ 36.35 ಸರಾಸರಿಯಲ್ಲಿ ಮತ್ತು 142.16 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.