ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯು ಮುಗಿದ ಬಳಿಕ ಟಿ20 ಸರಣಿಗಳು ನಡೆಯಲಿವೆ. ಈ ಸರಣಿಗೆ ಈಗಾಗಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಸ್ಟಾರ್ ಪ್ಲೇಯರ್, ಈಗ ದೇಶೀಯ ಟೂರ್ನಿಯಲ್ಲಿ ಅಬ್ಬರದ ಆಟವನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕೈ ಬಿಟ್ಟ ಆಯ್ಕೆದಾರರಿಗೆ ಬ್ಯಾಟ್‌ನಿಂದಲೇ ಉತ್ತರ ನೀಡಿದ್ದಾರೆ.
ಟೀಮ್ ಇಂಡಿಯಾದ ಟಿ20 ತಂಡ ಬಲಿಷ್ಠವಾಗಿದೆ. ಒಂದು ಸ್ಥಾನಕ್ಕಾಗಿ ಹಲವು ಆಟಗಾರರು ಫೈಟ್ ನಡೆಸುತ್ತಿದ್ದಾರೆ. ಇದೇ ವೇಳೆ ಫಿನಿಷರ್ ಪಾತ್ರದಲ್ಲಿ ಮಿಂಚುತ್ತಿದ್ದ ಸ್ಟಾರ್ ಪ್ಲೇಯರ್ ಒಬ್ಬರು, ಈಗ ತಂಡದಿಂದ ಹೊರ ನಡೆದಿದ್ದಾರೆ. ಆದರೆ ಇಷ್ಟಕ್ಕೆ ಹತಾಶರಾಗದ ಪ್ಲೇಯರ್ ದೇಶೀಯ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಪ್ಲೇಯರ್ ರಿಂಕು ಸಿಂಗ್ ಅಬ್ಬರಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ರಿಂಕು ಉತ್ತರ ಪ್ರದೇಶ ಪರ ಬ್ಯಾಟ್ ಮಾಡುತ್ತಿದ್ದಾರೆ. ಈ ವೇಳೆ ರಿಂಕು ಚಂಡೀಗಢ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. 240 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ ರಿಂಕು ತಂಡಕ್ಕೆ ಆಧಾರವಾದರು. ಇವರ ಅಬ್ಬರದ ಬ್ಯಾಟಿಂಗ್ ಪರಿಣಾಮ ಉತ್ತರ ಪ್ರದೇಶ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 212 ರನ್ ಗಳಿಸಿತು.
ಚಂಡೀಗಢ ವಿರುದ್ಧ ಉತ್ತರ ಪ್ರದೇಶ ತಂಡ 200 ಗಡಿಯನ್ನು ಮುಟ್ಟುವಲ್ಲಿ ರಿಂಕು ಮಹತ್ವದ ಪಾತ್ರ ವಹಿಸಿದರು. ಇವರು ಕೇವಲ 10 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 24 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಸಮೀರ್ ರಿಜ್ವಿ 42 ಎಸೆತಗಳಲ್ಲಿ 70 ರನ್ ಗಳಿಸಿ ಉತ್ತರ ಪ್ರದೇಶ ತಂಡಕ್ಕೆ ಆಧಾರವಾದರು.

213 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚಂಡೀಗಢ ತಂಡ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಚಂಡೀಗಢ ಪರ ಮನನ್ ವೋಹ್ರಾ 35 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 61 ರನ್ ಬಾರಿಸಿ ಔಟ್ ಆದರು. ನಿಖಿಲ್ ಠಾಕೂರ್ 32, ಅಮೃತ್ 30 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಚಂಡೀಗಢ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಸೇರಿಸಿತು. ಉತ್ತರ ಪ್ರದೇಶ ತಂಡದ ಪರ ಭುವನೇಶ್ವರ್ ಕುಮಾರ್ 3, ವಿಪ್ರರಾಜ್ ನಿಗಮ್ 2 ವಿಕೆಟ್ ಉರುಳಿಸಿದರು. ಉತ್ತರ ಪ್ರದೇಶ ತಂಡ ಬಿ ಗುಂಪಿನಲ್ಲಿ ಆಡಿದ 5 ಪಂದ್ಯಗಳಲ್ಲಿ 3 ಜಯ, 2 ಸೋಲು ಕಂಡಿದ್ದು 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.