ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ 3-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅವರು ಧ್ರುವ್ ಜುರೆಲ್ ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಆಗಿ ಮುಂದುವರಿಸಬೇಕು ಎಂದು ಭಾವಿಸಿದ್ದಾರೆ.

ಸದ್ಯಕ್ಕೆ ರಿಷಭ್ ಪಂತ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಬಾರದು ಮತ್ತು ಟೆಸ್ಟ್ ಕ್ರಿಕೆಟ್‌ಗೆ ಮರಳಲು ಸಾಕಷ್ಟು ಸಮಯ ಮತ್ತು ದೇಶೀಯ ಕ್ರಿಕೆಟ್ ಅನುಭವವನ್ನು ನೀಡಬೇಕು ಎಂದು ಬ್ರಾಡ್ ಹಾಗ್ ಹೇಳಿದರು.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನದಲ್ಲಿ ಯುವ ಆಟಗಾರ ಧ್ರುವ್ ಜುರೆಲ್ ಮಿಂಚುತ್ತಿದ್ದಾರೆ ಮತ್ತು ತಂಡದ ಬ್ರೇಕೌಟ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಇನ್ನು 2022ರ ಡಿಸೆಂಬರ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ರಿಷಭ್ ಪಂತ್ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
"ಭಾರತ ತಂಡ ಧ್ರುವ್ ಜುರೆಲ್‌ನೊಂದಿಗೆ ಇರುತ್ತಾರೆ ಮತ್ತು ತ್ವರಿತವಾಗಿ ರಿಷಭ್ ಪಂತ್ ಕಡೆ ಹಿಂತಿರುಗುವುದಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ತಿಳಿಸಿದರು.

"ಟೀಮ್ ಇಂಡಿಯಾ ರಿಷಭ್ ಪಂತ್‌ನನ್ನು ಸುದೀರ್ಘ ಸ್ವರೂಪಕ್ಕಾಗಿ ಕೆಲವು ಪ್ರಥಮ ದರ್ಜೆ ಕ್ರಿಕೆಟ್‌ಗೆ ಹೋಗುವಂತೆ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದರಿಂದ ಅವರ ದೇಹವು ಅದನ್ನು ತಡೆದುಕೊಳ್ಳುತ್ತದೆ ಮತ್ತು ಬ್ಯಾಟಿಂಗ್ ದೃಷ್ಟಿಕೋನದಿಂದ, ಅಪಘಾತದ ಮೊದಲು ಅವರು ಹೊಂದಿದ್ದ ಸಾಮರ್ಥ್ಯವನ್ನು ಅವರು ಇನ್ನೂ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ," ಎಂದು ಬ್ರಾಡ್ ಹಾಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
"ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಾರೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಆದರೆ ಧ್ರುವ್ ಜುರೆಲ್‌ರನ್ನು ಹಿಂದಕ್ಕೆ ತಳ್ಳಿದರೆ ಅದು ದೊಡ್ಡ ಅಪಾಯ ಎಂದು ನಾನು ಭಾವಿಸುತ್ತೇನೆ," ಎಂದರು.
ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಕೆಎಸ್ ಭರತ್ ಬ್ಯಾಟ್‌ನೊಂದಿಗೆ ಪ್ರದರ್ಶನ ನೀಡಲು ವಿಫಲವಾಗಿದ್ದು, ನಂತರ ಧ್ರುವ್ ಜುರೆಲ್‌ಗೆ ಭಾರತ ತಂಡಕ್ಕೆ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು.
23ರ ಹರೆಯದ ಧ್ರುವ್ ಜುರೆಲ್ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ 46 ರನ್ ಗಳಿಸುವ ಮೂಲಕ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಪ್ರಭಾವ ಬೀರಿದರು. ಅನಂತರ ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಅವರ ಅಸಾಧಾರಣ ಪ್ರದರ್ಶನ ಕಂಡುಬಂದಿದೆ.
ಕೇವಲ ತನ್ನ 2ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ಧ್ರುವ್ ಜುರೆಲ್ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್ ಗಳಿಸಿ ಭಾರತದ ಪಂದ್ಯ ವಿಜೇತ ಆಟಗಾರರಲ್ಲಿ ಒಬ್ಬರಾದರು.
ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದು ಧ್ರುವ್ ಜುರೆಲ್ ಅವರ ಅಮೋಘ ಪ್ರದರ್ಶನದ ಪ್ರಮುಖ ಅಂಶವಾಗಿದೆ. ಭಾರತ 5 ವಿಕೆಟ್‌ಗೆ 161 ರನ್‌ಗಳಿಗೆ ತತ್ತರಿಸಿತ್ತು ಮತ್ತು ಕೆಳ ಕ್ರಮಾಂಕದೊಂದಿಗೆ ಧ್ರುವ್ ಜುರೆಲ್ ಅವರ ನಿರ್ಣಾಯಕ ಜೊತೆಯಾಟವು ತಂಡದ ಮೊತ್ತವನ್ನು 307 ರನ್‌ಗಳಿಗೆ ಕೊಂಡೊಯ್ದಿತು. ಇದು ಇಂಗ್ಲೆಂಡ್‌ನ ಮುನ್ನಡೆಯನ್ನು 46 ರನ್‌ಗಳಿಗೆ ತಗ್ಗಿಸಿತು.
4ನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 192 ರನ್‌ಗಳನ್ನು ಚೇಸಿಂಗ್ ಮಾಡಿದ ಸಮಯದಲ್ಲಿ, ಧ್ರುವ್ ಜುರೆಲ್ ಮತ್ತೊಮ್ಮೆ ಶುಭ್ಮನ್ ಗಿಲ್ ಅವರೊಂದಿಗೆ ಅಜೇಯ 72 ರನ್‌ಗಳ ಜೊತೆಯಾಟ ಹೊಂದುವ ಮೂಲಕ ಪ್ರಬುದ್ಧತೆಯ ಪ್ರದರ್ಶನವನ್ನು ತೋರಿಸಿದರು.
ಇದೇ ವೇಳೆ ರಿಷಭ್ ಪಂತ್ ಅವರು 2024ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಪುನರಾಗಮನ ಮಾಡಲಿದ್ದಾರೆ. ತನ್ನ ಅಪಘಾತಕ್ಕೂ ಮುನ್ನ SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ 26 ವರ್ಷದ ಆಟಗಾರ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವುದನ್ನು ಭಾರತೀಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.