
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟರ್‌ಗಳ ವೈಫಲ್ಯದ ಮಧ್ಯೆ ರಿಷಭ್ ಪಂತ್ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಹೀರೋ ಆಗಿ ಮಿಂಚಿದ ರಿಷಭ್ ಪಂತ್ ಅಜೇಯ 100 ರನ್ ಸಿಡಿಸಿ ಭಾರತ ತಂಡಕ್ಕೆ ಆಸರೆಯಾಗಿದ್ದಾರೆ. ರಿಷಬ್ ಪಂತ್ ನೀಡಿದ ಈ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಪಂಡಿತರು ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದ್ದಾರೆ.
ರಿಷಭ್ ಪಂತ್ ದಕ್ಷಿಣ ಆಪ್ರಿಕಾ ನೆಲದಲ್ಲಿ ಸಿಡಿಸಿದ ಈ ಶತಕದೊಂದಿಗೆ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಭಾರತೀಯ ವಿಕೆಟ್‌ಕೀಪರ್ ಓರ್ವ ದಕ್ಷಿಣ ಆಫ್ರಿಕಾ ನೆಲದಲ್ಲಿ ಸಿಡಿಸಿದ ಮೊದಲ ಶತಕ ಎನಿಸಿಕೊಂಡಿದೆ ಪಂತ್ ಸಿಡಿಸಿದ ಈ ಶತಕ. ಇದಕ್ಕೂ ಮುನ್ನ ಭಾರತದ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಎಂಎಸ್ ಧೋನಿ ಗಳಿಸಿದ ಸ್ಕೋರ್ ಹೈಯೆಸ್ಟ್ ಎನಿಸಿತ್ತು. 2010/11ರ ಪ್ರವಾಸದಲ್ಲಿ ಧೋನಿ 90 ರನ್‌ಗಳಿಸಿದ್ದು ಈವರೆಗಿನ ಅತಿ ಹೆಚ್ಚಿನ ಸ್ಕೋರ್ ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಇದನ್ನು ರಿಷಭ್ ಪಂತ್ ಹಿಂದಿಕ್ಕಿದ್ದಾರೆ.
ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿದ ಈ ಶತಕ ತಂಡಕ್ಕೆ ಅತ್ಯಂತ ಅಗತ್ಯ ಸಂದರ್ಭದಲ್ಲಿ ಹಾಗೂ ಅತ್ಯಂತ ಸಂಕಷ್ಟ ದ ಸಂದರ್ಭದಲ್ಲಿ ಬಂದಿದೆ ಎಂಬುದು ಪ್ರಮುಖ ಸಂಗತಿ. ಮೂರನೇ ದಿನದಾಟದ ಮೂರು ಓವರ್‌ಗಳಾಗುವಷ್ಟರಲ್ಲಿ ಭಾರತ ಇಂದು ತನ್ನ ಮತ್ತೆರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಉತ್ತಮ ಜೊತೆಯಾಟವೊಂದನ್ನು ನೀಡಿದರು. ಈ ಜೋಡಿ ಭಾರತ ತಂಡದ ಕುಸಿತವನ್ನು ಒಂದು ಹಂತಕ್ಕೆ ತಡೆಯುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ ತಂಡದ ರನ್ ಹೆಚ್ಚಳಕ್ಕೂ ಕಾರಣವಾದರು. ರಿಷಭ್ ಪಂತ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಭರ್ಜರಿ 94 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ಭಾರತ ತಂಡಕ್ಕೆ ಆಸರೆಯಾದರು.
ನಾಯಕ ವಿರಾಟ್ ಕೊಹ್ಲಿ ವಟ್ ಆದ ಬಳಿಕ ಕೆಳ ಕ್ರಮಾಂಕದ ಆಟಗಾರರಿಂದಲೂ ಉತ್ತಮ ಸಾಥ್ ದೊರೆಯದಿದ್ದರೂ ಹೆಚ್ಚು ಕಾಲ ಕ್ರೀಸ್ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದರು ಪಂತ್. ಈ ಮೂಲಕ ತಂಡದ ಮೊತ್ತವನ್ನು 200ರ ಸನಿಹಕ್ಕೆ ತಲುಪಿಸಿದರು. ಈ ಹಂತದಲ್ಲಿ ರಿಷಭ್ ಪಂತ್ ತಮ್ಮ ಶತಕವನ್ನು ಕೂಡ ಯಶಸ್ವಿಯಾಗಿ ಪೂರ್ಣಗೊಳಿಸಿದರು ಸಂಭ್ರಮಿಸಿದರು. ಈ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸ್ಮರಣೀಯ ಇನ್ನಿಂಗ್ಸ್ ನೀಡಿದ್ದಾರೆ.
ರಿಷಭ್ ಪಂತ್ ಅವರ ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ 198 ರನ್‌ಗಳಿಗೆ ಆಲೌಟ್ ಆಯಿತು. ಇದರಲ್ಲಿ ರಿಷಭ್ ಪಂತ್ ಒಬ್ಬರೆ 100 ರನ್‌ಗಳನ್ನು ಬಾರಿಸಿದ್ದರು. ಈ ಮೂಕ ಭಾರತ ತಂಡ ದಕ್ಷಿಣ ಆಪ್ರಿಕಾಗೆ 212 ರನ್‌ಗಳ ಗುರಿಯನ್ನು ನಿಗದಿಪಡಿಸಿದೆ.
ಇನ್ನು ಟೀಮ್ ಇಂಡಿಯಾ ಪರವಾಗಿ ರಿಷಭ್ ಪಂತ್ ನೀಡಿದ ಈ ಪ್ರದರ್ಶನಕ್ಕೆ ರೋಹಿತ್ ಶರ್ಮಾ ಟ್ವಿಟ್ಟರ್‌ನಲ್ಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಶಬ್ದವನ್ನು ಹೇಳದೆಯೇ ರೋಹಿತ್ ಮಾಡಿದ ಟ್ವಿಟ್ ಅಭಿಮಾನಿಗಳ ಗಮನಸೆಳೆದಿದೆ. ಇನ್ನು ವಿರೇಂದ್ರ ಸೆಹ್ವಾಗ್ ಪಂತ್ ಬಗ್ಗೆ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ ಪಂತ್ ಭಾರತ ತಮಡದ ದೊಡ್ಡ ಆಸ್ತಿ ಎಂದಿದ್ದಾರೆ. ಇನ್ನು ಅನುಭವಿ ಶಿಖರ್ ಧವನ್, ದಿನೇಶ್ ಕಾರ್ತಿಕ್, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಸಹಿತ ಅನೇಕ ಕ್ರಿಕೆಟ್ ಲೋಕದ ತಾರೆಯರಿಂದ ಪಂತ್ ಬ್ಯಾಟಿಂಗ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.