

ಲಂಡನ್, ಜುಲೈ 24: ನನ್ನ ಪ್ರತಿಭೆ ರೂಪುಗೊಳ್ಳೋದಕ್ಕೆ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತುಂಬಾ ಸಹಾಯ ಮಾಡಿದ್ದಾರೆ. ಕ್ರಿಕೆಟ್ ವೃತ್ತಿ ಜೀವನದಲ್ಲಿ ಧೋನಿಯ ಸಲಹೆಗಳು ನಾನು ಗುರುತಿಸಿಕೊಳ್ಳಲು ನೆರವು ನೀಡಿದವು ಎಂದು ಯುವ ಸ್ಫೋಟಕ ಬ್ಯಾಟ್ಸ್ಮನ್ ರಿಷಬ್ ಪಂತ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡದಲ್ಲಿ ಸ್ಥಾನ ದೊರೆತಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿ ಮಾತನಾಡಿದ ರಿಷಬ್, ಅನುಭವಿ ಆಟಗಾರ ಧೋನಿ ಅವರು ತಾನು ಬೆಳೆಯಲು, ಕ್ರಿಕೆಟ್ ನಲ್ಲಿ ಗುರುತಿಸಿಕೊಳ್ಳಲು ತುಂಬಾ ನೆರವು ನೀಡಿದ್ದಾರೆ ಎಂದರು.
'ಯಾವುದೇ ರೀತಿಯಲ್ಲಿ ನನಗೆ ಬೆಂಬಲ ಬೇಕಿದ್ದಾಗ ನಾನು ಮಾಹಿ ಭಾಯಿಯಲ್ಲಿ ಪ್ರಶ್ನಿಸಿ ಸಲಹೆ ಪಡೆದುಕೊಳ್ಳುತ್ತಿದ್ದೆ. ಮುಖ್ಯವಾಗಿ ಐಪಿಎಲ್ ನಲ್ಲಿ ವಿಕೆಟ್ ಕೀಪಿಂಗ್, ಬ್ಯಾಟಿಂಗ್ ಕುರಿತು ಧೋನಿ ನನಗೆ ಸಾಕಷ್ಟು ಸಲಹೆ ನೀಡಿ ಬೆಂಬಲಿಸಿದ್ದಾರೆ' ಎಂದು 20ರ ಹರೆಯದ ಪಂತ್ ಬಿಸಿಸಿಐ ಡಾಟ್ ಟಿವಿ ಜೊತೆ ಹೇಳಿಕೊಂಡಿದ್ದಾರೆ.
'ವಿಕೆಟ್ ಕೀಪಿಂಗ್ ವಿಚಾರಕ್ಕೆ ಬಂದಾಗ ನಿನ್ನ ಕೈಗಳು ಮತ್ತು ತಲೆಯ ಪರಸ್ಪರ ಸಹಕಾರ ಪರಿಣಾಮಕಾರಿ. ದೇಹದ ಸಮತೋಲನ ಆಟದಲ್ಲಿ ಎರಡನೆಯ ಸಂಗತಿಯಾಗುತ್ತದೆ ಎಂದು ಧೋನಿ ಹೇಳಿದ್ದರು. ಧೋನಿಯ ಈ ಸಲಹೆ ನನಗೆ ಬಹಳ ಸಹಾಯ ಮಾಡಿತು' ಎಂದು ಪಂತ್ ಧೋನಿಯನ್ನು ಸ್ಮರಿಸಿಕೊಂಡರು.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ತನ್ನನ್ನು ಹಾರೈಸಿರುವುದನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಂಡ ಪಂತ್, 'ಟೆಸ್ಟ್ ನಲ್ಲಿ ಸ್ಥಾನ ಗಿಟ್ಟಿಕೊಳ್ಳುವ ನನ್ನ ಕನಸು ನನಸಾಗಿದೆ. ಅವಕಾಶವನ್ನು ಉತ್ತಮರೀತಿಯಲ್ಲಿ ಬಳಸಿಕೊಳ್ಳಲಿದ್ದೇನೆ' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.