ಟೀಮ್ ಇಂಡಿಯಾದ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಗಂಭೀರ ಅಫಘಾತಕ್ಕೆ ಒಳಗಾಗಿ ಗಾಯಕ್ಕೆ ತುತ್ತಾದ ಬಳಿಕ ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಪ್ರಸ್ತುತ ಎನ್‌ಸಿಎನಲ್ಲಿರುವ ರಿಷಭ್ ಪಂತ್ ಚೇತರಿಕೆಯ ಹಾದಿ ಅದ್ಭುತವಾಗಿದೆ. ಇದೀಗ ಟೀಮ್ ಇಂಡಿಯಾದ ಆಟಗಾರ ಪಂತ್ ಮತ್ತೆ ಮೈದಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಸಂತಸ ಮೂಡಿಸಿದ್ದಾರೆ.
ಡಿಸೆಂಬರ್ 2022ರಲ್ಲಿ ರಿಷಭ್ ಪಂತ್ ರಾಷ್ಟ್ರೀಯ ತಂಡದ ಕರ್ತವ್ಯ ಮುಗಿಸಿ ದೆಹಲಿಯಿಂದ ತಮ್ಮ ತವರು ರೋರ್ಕೀಯತ್ತ ಪ್ರಯಾಣ ಬೆಳೆಸಿದ್ದರು. ಆದರೆ ದೆಹಲಿ- ಡೆಹ್ರಾಡೂನ್ ಹೈವೇನಲ್ಲಿ ಪಂತ್ ಸ್ವತಃ ಚಲಾಯಿಸುತ್ತಿದ್ದ ಕಾರು ತೀವ್ರ ಅಪಘಾತಕ್ಕೆ ತುತ್ತಾಗಿತ್ತು. ಈ ಸಂದರ್ಭದಲ್ಲಿ ಪವಾಡಸದೃಶವಾಗಿ ರಿಷಭ್ ಪಂತ್ ಪಾರಾಗಿದ್ದರು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತುಯಾಗಿದ್ದರೂ ಕೂಡ ಪಂತ್ ಮಾರಣಾಂತಿಕ ಗಾಯಗಳಿಂದ ಪಾರಾಗಿದ್ದರು. ಆದರೆ ಕೆಲ ಸುಟ್ಟ ಗಾಯ, ತಲೆ, ಬೆನ್ನು ಹಾಗೂ ಕಾಲಿಗೆ ಸಾಕಷ್ಟು ಗಾಯಗಳಾಗಿತ್ತು.

ಈ ಅಪಘಾತದ ತೀವ್ರತೆಗೆ ರಿಷಭ್ ಪಂತ್ ಅವರ ಬಲಗಾಲಿನ ಲಿಗಮೆಂಟ್ ಹರಿದಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಬೇಕಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಪಂತ್ ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಹಾಗಿದ್ದರೂ ಮುಂಬರುವ ಏಕದಿನ ವಿಶ್ವಕಪ್‌ಗೆ ರಿಷಭ್ ಪಂತ್ ಕಮ್‌ಬ್ಯಾಕ್ ಮಾಡುವ ಸಾಧ್ಯತೆ ಬಹುತೇಕ ಇಲ್ಲವಾಗಿದ್ದು ಮುಂದಿನ ವರ್ಷಾರಂಭದಲ್ಲಿ ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಭಾರತ ತಂಡಕ್ಕೆ ಮರಳುವ ನಿರೀಕ್ಷೆಯಿದೆ.
ಅಕ್ಟೋಬರ್ 4 1997 ರಂದು ಜನಿಸಿದ ಪಂತ್, ಕ್ರಿಕೆಟ್‌ನಲ್ಲಿ ಅದ್ಭುತ ವೃತ್ತಿಜೀವನ ಹೊಂದಿದ್ದಾರೆ. ಭಾರತದ ಪರವಾಗಿ ಎಲ್ಲಾ ಸ್ವರೂಪಗಳಲ್ಲಿಯೂ ಆಡುವ ಆಟಗಾರ ಎನಿಸಿಕೊಂಡಿರುವ ಪಂತ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಯಕರಾಗಿದ್ದರು. 2017ರ ಜನವರಿಯಲ್ಲಿ ಭಾರತದ ಪರವಾಗಿ ಚೊಚ್ಚಲ T20 ಪಂದ್ಯ ಆಡಿದ್ದ ಪಂತ್ ಆಗಸ್ಟ್ 2018ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಒನ್ನು ಅಕ್ಟೋಬರ್ 2018ರಲ್ಲಿ ಅವರು ಏಕದಿನ ಮಾದರಿಗೂ ಪದಾರ್ಪಣೆ ಮಾಡಿ ಗಮನಸೆಳೆದಿದ್ದರಯ. 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ T20ಐ ಸರಣಿಗೆ ಪಂತ್ ಅವರನ್ನು ಭಾರತೀಯ ನಾಯಕರನ್ನಾಗಿ ಕೂಡ ನೇಮಿಸಲಾಗಿತ್ತು.
ಭೀಕರ ಅಪಘಾತದಿಂದಾದ ಹಿನ್ನಡೆಯ ಹೊರತಾಗಿಯೂ ಪಂತ್ ತನ್ನ ರಿಹ್ಯಾಬಿಲಿಟೇಶನ್‌ನಲ್ಲಿ ಅದ್ಭುತ ಪ್ರಗತಿ ಸಾಧಿಸಿದ್ದಾರೆ. ಆಗಸ್ಟ್ 16, 2023ರಲ್ಲಿ ಅವರು ಬ್ಯಾಟಿಂಗ್ ಮತ್ತು ನೆಟ್ಸ್‌ನಲ್ಲಿ ಕೀಪಿಂಗ್ ಅನ್ನು ಮತ್ತೆ ಆರಂಭಿಸಿದ್ದಾರೆ. ಈ ಮೂಲಕ ಕಮ್‌ಬ್ಯಾಕ್ ಭರವಸೆ ಮುಡಿಸಿದ್ದಾರೆ. ಪಂತ್ ಅವರ ಅಭಿಮಾನಿಗಳು ಮತ್ತು ಸಹ ಕ್ರಿಕೆಟಿಗರು ಯುವ ಕ್ರಿಕೆಟಿಗನ ಸಂಪೂರ್ಣ ಚೇತರಿಸಿಕೆಗೆ ಮತ್ತು ಆಟಕ್ಕೆ ಕಮ್‌ಬ್ಯಾಕ್‌ನ ನಿರೀಕ್ಷೆಯಲ್ಲಿದ್ದಾರೆ.