ರೋಹಿತ್ ಬದಲು ಕೊಹ್ಲಿ ನಾಯಕನಾಗಲಿ, ಈತ ನಾಯಕನಾಗುವಷ್ಟು ದೊಡ್ಡವನಲ್ಲ ಎಂದ ಕನೇರಿಯಾ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ನಂತರ ಟೀಮ್ ಇಂಡಿಯಾ ಆಡುತ್ತಿರುವ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಹೌದು, ರೋಹಿತ್ ಶರ್ಮ ನಾಯಕತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದು, 1 ಟೆಸ್ಟ್ ಪಂದ್ಯ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಕಣಕ್ಕಿಳಿಯಲಿದೆ.
ಮೊದಲಿಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯವೊಂದು ನಡೆಯಲಿದ್ದು, ಇದು ಕಳೆದ ವರ್ಷ ಭಾರತ ಮತ್ತು ಇಂಗ್ಲೆಂಡ್ ನಡುವೆ ಆಯೋಜನೆಯಾಗಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಪಂದ್ಯವಾಗಿದೆ. ಹೌದು, ಕಳೆದ ವರ್ಷ ಆಯೋಜನೆಯಾಗಿದ್ದ ಇತ್ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಹೀಗಾಗಿ ಆ ಪಂದ್ಯ ಇದೇ ಜುಲೈ 1ರಿಂದ ಆರಂಭವಾಗುತ್ತಿದೆ. ಇಂಗ್ಲೆಂಡ್‌ನ ಎಡ್ಜ್ ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ಲೀಸೆಸ್ಟರ್ ಶೈರ್ ವಿರುದ್ಧ ಟೀಮ್ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಿದೆ.
ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅಭ್ಯಾಸ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಕೊರೊನಾ ಸೋಂಕಿಗೆ ಒಳಗಾಗಿರುವ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಮೂಡಿಸಿದ್ದು, ರೋಹಿತ್ ಬದಲಾಗಿ ಟೀಮ್ ಇಂಡಿಯಾದ ನಾಯಕತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಇದೀಗ ಮೂಡಿದೆ. ರೋಹಿತ್ ಶರ್ಮಾ ಬದಲಾಗಿ ನಾಯಕ ಸ್ಥಾನಕ್ಕೆ ಉಪ ನಾಯಕ ಜಸ್ ಪ್ರೀತ್ ಬೂಮ್ರಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಯುವ ಆಟಗಾರ ರಿಷಭ್ ಪಂತ್ ಅವರ ಹೆಸರುಗಳು ಸದ್ಯ ಕೇಳಿ ಬರುತ್ತಿದ್ದು, ಈ ಕುರಿತಾಗಿ ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ರೋಹಿತ್ ಬದಲು ವಿರಾಟ್ ಕೊಹ್ಲಿ ನಾಯಕನಾಗಲಿ
ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾದರೆ ವಿರಾಟ್ ಕೊಹ್ಲಿ ನಾಯಕನಾಗಿ ಕಣಕ್ಕಿಳಿಯುವುದು ಅತ್ಯುತ್ತಮ ಆಯ್ಕೆ ಎಂದು ದಾನಿಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ. ವಿರಾಟ್ ಕೊಹ್ಲಿ ಸಿದ್ಧರಿಲ್ಲದಿದ್ದರೆ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ ನಾಯಕನಾಗಿ ತಂಡವನ್ನು ಈ ಪಂದ್ಯದಲ್ಲಿ ಮುನ್ನಡೆಸಬಹುದು ಎಂದು ಕೂಡ ದಾನಿಶ್ ಕನೇರಿಯಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಇಬ್ಬರೂ ನಾಯಕರಾಗುವುದು ಬೇಡ
ಇನ್ನೂ ಮುಂದುವರಿದು ಮಾತನಾಡಿರುವ ದಾನಿಶ್ ಕನೇರಿಯಾ ರಿಷಭ್ ಪಂತ್ ಮತ್ತು ಜಸ್ ಪ್ರೀತ್ ಬೂಮ್ರಾ ಟೀಮ್ ಇಂಡಿಯಾ ಟೆಸ್ಟ್ ನಾಯಕರಾಗುವುದು ಬೇಡ ಎಂದಿದ್ದಾರೆ. ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ನಾಯಕತ್ವವನ್ನು ದಾರುಣವಾಗಿ ನಿರ್ವಹಿಸಿದ್ದರು, ಪಂತ್ ಇನ್ನೂ ಸಹ ನಾಯಕತ್ವದ ಜವಾಬ್ದಾರಿ ಹೊತ್ತುಕೊಳ್ಳುವಷ್ಟು ದೊಡ್ಡವನಾಗಿಲ್ಲ ಎಂದು ದಾನಿಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ. ಹಾಗೂ ಜಸ್ಪ್ರೀತ್ ಬುಮ್ರಾಗೆ ನಾಯಕತ್ವವನ್ನು ನೀಡಿದರೆ ಹೆಚ್ಚಿನ ಹೊರೆಯಾಗಲಿದ್ದು, ವೈಯಕ್ತಿಕ ಪ್ರದರ್ಶನ ಕ್ಷೀಣಿಸಬಹುದು, ಹೀಗಾಗಿ ಬೂಮ್ರಾಗೂ ನಾಯಕತ್ವವನ್ನು ನೀಡುವುದು ಸರಿಯಲ್ಲ ಎಂದು ಕನೇರಿಯಾ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ಪ್ರಕಟವಾದ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ ( ಉಪನಾಯಕ ), ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ
ನೂತನ ಸೇರ್ಪಡೆ: ಮಯಾಂಕ್ ಅಗರ್ವಾಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications