
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಎರಡನೇ ಅಭ್ಯಾಸ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಪಂತ್ ಶತಕವನ್ನು ಸಿಡಿಸಿದ್ದು ವಿಕೆಟ್ ಕೀಪರ್ ಸ್ಥಾನಕ್ಕೆ ಅನುಭವಿ ಸಾಹಾಗೆ ಸಾಕಷ್ಟು ಪೈಪೋಟಿ ನೀಡುತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಯಾರನ್ನು ವಿಕೆಟ್ ಕೀಪರ್ ಆಗಿ ಕಣಕ್ಕಿಳಿಬೇಕು ಎಂಬ ವಿಚಾರವಾಗಿ ಕ್ರಿಕೆಟ್‌ನ ದಿಗ್ಗಜ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ಟೆಸ್ಟ್ ಸರಣಿಗೆ ಉತ್ತಮ ಆಯ್ಕೆ ಯಾರಾಗಲಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.
ಸುನಿಲ್ ಗವಾಸ್ಕರ್ ವೃದ್ಧಿಮಾನ್ ಸಾಹಾ ಹಾಗೂ ರಿಷಭ್ ಪಂತ್ ಮಧ್ಯೆ ಯುವ ಆಟಗಾರ ಪಂತ್ ಮೇಲೆ ಒಲವು ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪಂತ್ ಆಯ್ಕೆ ಅತ್ಯುತ್ತಮವಾಗಿರಲಿದೆ, ಅವರಿಗೆ ಆಸ್ಟ್ರೇಲಿಯಾದಲ್ಲಿ ಈ ಹಿಂದಿನ ಸರಣಿಯಲ್ಲಿ ಆಡಿದ ಅನುಭವ ಸಾಥ್ ನೀಡಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಈ ಪ್ರವಾಸದಲ್ಲಿ ಟೆಸ್ಟ್ ಸರಣಿಯ ಆಯ್ಕೆ ತುಂಬಾ ಸವಾಲಿನದ್ದಾಗಿರಲಿದೆ. ಯಾಕೆಂದರೆ ರಿಷಭ್ ಪಂತ್ ಆಸ್ಟ್ರೇಲಿಯಾದಲ್ಲಿ ಎರಡು ವರ್ಷಗಳ ಹಿಂದೆ ಆಡಿದ್ದ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳಲ್ಲೂ ಭಾಗವಹಿಸಿದ್ದರು. ಇದರಲ್ಲಿ ಒಂದು ಶತಕವನ್ನು ಕೂಡ ಬಾರಿಸಿದ ಅವರಿ ವಿಕೆಟ್‌ನ ಹಿಂದೆ ಆಸಿಸ್ ಆಟಗಾರರಿಗೆ ಸಾಕಷ್ಟು ಕಾಡಿದ್ದರು. ಹೀಗಾಗಿ ಪಂತ್ ಕಡೆಗೆ ತಂಡದ ಗಮನ ಹರಿಯುವ ಸಾಧ್ಯತೆಯಿದೆ ಎಂದು ಸುನಿಲ್ ಗವಾಸ್ಕರ್ ಹೇಳಿಕೊಂಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಪಂತ್ ಅಭ್ಯಾಸ ಪಂದ್ಯದಲ್ಲಿ ಬಾರಿಸಿದ ಶತಕದ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು. ಖಂಡಿತವಾಗಿಯೂ ಸರಣಿಯ ಆರಂಭಕ್ಕೆ ಕೆಲವೇ ದಿನಗಳಿರುವಾಗ ನೀವು ಶತಕವನ್ನು ಬಾರಿಸಿದರೆ ಮ್ಯಾನೇಜ್‌ಮೆಂಟ್‌ಗೆ ನೀವು ಆಯ್ಕೆಯಾಗಿರುತ್ತೀರಿ ಎಂದು ಗವಾಸ್ಕರ್ ಹೇಳಿದ್ದಾರೆ.