
ಭಾರತ ತಂಡದ ಸ್ಟಾರ್ ಬ್ಯಾಟರ್ ರಿಷಬ್ ಪಂತ್ ಡಿಸೆಂಬರ್ 30ರಂದು ನಡೆದಿದ್ದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರಿಷಬ್ ಪಂತ್ ಸದ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಊರುಗೋಲಿನ ಸಹಾಯವಿಲ್ಲದೆ ಅವರು ಇನ್ನೂ ನಡೆಯಲು ಸಾಧ್ಯವಾಗುತ್ತಿಲ್ಲ. ಆದರೂ ಆತ್ಮವಿಶ್ವಾಸದಿಂದಲೇ ಹೊಸ ಸವಾಲನ್ನು ಎದುರಿಸುತ್ತಿರುವ ಪಂತ್ ಶೀಘ್ರದಲ್ಲೇ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಬುಧವಾರ ತಮ್ಮ ಆರೋಗ್ಯದ ಬಗ್ಗೆ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
ಈಜುಕೊಳದಲ್ಲಿ ನಿಧಾನವಾಗಿ ನಡೆದಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪ್ರತಿಯೊಂದು ಸಣ್ಣ ವಿಚಾರಗಳು ಮುಖ್ಯವಾಗುತ್ತವೆ ಎಂದು ಅವರು ಹೇಳಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಅಭ್ಯಾಸ ಮಾಡುತ್ತಿದ್ದರೆ, ರಿಷಬ್ ಪಂತ್ ನಡೆಯಲು ಆರಂಭಿಸಿದ್ದಾರೆ.
ಭೀಕರ ಕಾರು ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಬಿಸಿಸಿಐ ಮೇಲ್ವಿಚಾರಣೆಯಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಐಪಿಎಲ್ 2023ರ ಆವೃತ್ತಿಯಿಂದ ಪಂತ್ ಹೊರಬಿದ್ದಿದ್ದು, ಮತ್ತೆ ಕ್ರಿಕೆಟ್‌ಗೆ ಯಾವಾಗ ಮರಳುತ್ತಾರೆ ಎನ್ನುವುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.
ಬ್ಯಾಂಡೇಜ್ ತೆಗೆದಿರುವ ರಿಷಬ್ ಪಂತ್
ವೀಡಿಯೊದಲ್ಲಿ, ರಿಷಬ್ ಪಂತ್ ಈಜುಕೊಳದಲ್ಲಿ ನೀರಿನ ಅಡಿಯಲ್ಲಿ ನಡೆಯುವುದನ್ನು ಕಾಣಬಹುದು. ಪಂತ್ ಇನ್ನೂ ವಾಕಿಂಗ್ ಸ್ಟಿಕ್ ಸಹಾಯದಿಂದ ನಡೆಯುತ್ತಿದ್ದಾರೆ. ಆದರೆ ಅವರ ಕಾಲುಗಳಲ್ಲಿದ್ದ ಬ್ಯಾಂಡೇಜ್ ತೆಗೆದಿರುವುದು ಸಂತಸದ ವಿಚಾರವಾಗಿದೆ. ಈಜುಕೊಳದಲ್ಲಿ ನಿಧಾನವಾಗಿ ನಡೆದಾಡುತ್ತಾ ಸಾಕಷ್ಟು ಸಮಯ ಕಳೇದರು.
ಪ್ರತಿದಿನ 3-4 ಫಿಸಿಯೋಥೆರಪಿ ಸೆಷನ್‌ಗಳಿಗೆ ಒಳಗಾಗುತ್ತಿದ್ದೇನೆ ಎಂದು ಪಂತ್ ಈ ಮೊದಲು ಹೇಳಿಕೊಂಡಿದ್ದರು. ಅವರು ನೀರಿನಲ್ಲಿ ನಡೆಯುತ್ತಿರುವುದು ಆದಷ್ಟು ಬೇಗ ಚೇತರಿಸಿಕೊಳ್ಳುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವತ್ತ ಮುನ್ನಡೆಯುತ್ತಿದ್ದಾರೆ.
ನೀರಿನಲ್ಲಿ ನಡೆಯುವುದು ಮತ್ತು ವಾಕಿಂಗ್ ಮಾಡುವುದು ಕ್ರೀಡಾಪಟುಗಳಿಗೆ ಫಿಟ್ನೆಸ್ ಮತ್ತು ಗಾಯದ ಚೇತರಿಕೆಯ ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ ಎನ್ನುವುದು ಸಾಬೀತಾಗಿದೆ. ಹೆಚ್ಚಿನ ಗಾಯಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ, ದೇಹದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಕೀಲುಗಳ ಭಾರ ಹೊರುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಇದು ಪಂತ್ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ವಿಶ್ವಕಪ್‌ನಲ್ಲಿ ಆಡುವುದು ಕೂಡ ಅನುಮಾನ
ರಿಷಬ್ ಪಂತ್ ಮತ್ತೆ ಯಾವಾಗ ಕ್ರಿಕೆಟ್ ಮರಳುತ್ತಾರೆ ಎಂದು ಹೇಳುವುದು ಈಗಲೇ ಸಾಧ್ಯವಿಲ್ಲ ಎನ್ನಲಾಗಿದೆ. ಆದರೂ ಈ 2023ರ ಅಕ್ಟೋಬರ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಕೂಡ ಪಂತ್ ಆಡುವುದು ಅನುಮಾನ ಎನ್ನಲಾಗಿದೆ. ಪಂತ್ ಚೇತರಿಸಿಕೊಳ್ಳಲು ಕನಿಷ್ಠ ಒಂದು ವರ್ಷಗಳ ಕಾಲ ಬೇಕು ಎನ್ನಲಾಗಿದೆ.
2024ರ ಐಪಿಎಲ್ ವೇಳೆಗೆ ಪಂತ್ ಚೇತರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನಿವಾರ್ಯವಾಗಿ ಬೇರೆ ನಾಯಕನನ್ನು ಆಯ್ಕೆ ಮಾಡಬೇಕಾಗಿದ್ದು, ಶೀಘ್ರದಲ್ಲೇ ಹೊಸ ನಾಯಕನ ಹೆಸರನ್ನು ಸೂಚಿಸುವ ಸಾಧ್ಯತೆ ಇದೆ.