ಕಾರು ಅಪಘಾತದ ನಂತರ ಚೇತರಿಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಟೀಮ್ ಇಂಡಿಯಾ ವಿಕೆಟ್‌ಕೀಪರ್- ಬ್ಯಾಟರ್ ರಿಷಬ್ ಪಂತ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಟಿ20 ವಿಶ್ವಕಪ್ ಬಳಿಕ ಇದೀಗ ಬಾಂಗ್ಲಾದೇಶ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ.
ಕೇವಲ 34 ಟೆಸ್ಟ್‌ಗಳಲ್ಲಿ ರಿಷಬ್ ಪಂತ್ ದಿಗ್ಗಜರೂ ಮಾಡಲು ಸಾಧ್ಯವಾಗದ ಸಾಧನೆಯನ್ನು ಮಾಡಿದ್ದಾರೆ. ಹೀಗಾಗಿ ಪಂತ್ ಅವರನ್ನು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಸಲಾಗುತ್ತದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿ ಅವರು ಮಾಡಿರುವ ಬೃಹತ್ ದಾಖಲೆಯನ್ನು ಮುಂದಿನ ದಿನಗಳಲ್ಲಿ ಪಂತ್ ಮುರಿಯಲಿದ್ದಾರೆ.

ಟೀಮ್ ಇಂಡಿಯಾ ಪರ ಇದುವರೆಗೆ ಪಂತ್ ಆಡಿರುವ 34 ಟೆಸ್ಟ್ ಪಂದ್ಯಗಳ 67 ಇನ್ನಿಂಗ್ಸ್‌ಗಳಲ್ಲಿ 134 ಆಟಗಾರರನ್ನು ವಿಕೆಟ್‌ಕೀಪಿಂಗ್‌ನಲ್ಲಿ ಔಟ್ ಮಾಡಿದ್ದಾರೆ. ಇದರೊಂದಿಗೆ ಪಂತ್ ಅವರು ಇಂಗ್ಲೆಂಡ್‌ನ ಜೋಸ್ ಬಟ್ಲರ್, ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿ, ಶ್ರೀಲಂಕಾದ ಧನಂಜಯ್ ಡಿ ಸಿಲ್ವಾ ಅವರಂತಹ ಸ್ಟಾರ್ ವಿಕೆಟ್‌ಕೀಪರ್‌ಗಳನ್ನು ಹಿಂದಿಕ್ಕಿದ್ದಾರೆ. ಇದೀಗ ಧೋನಿ ದಾಖಲೆಯನ್ನು ಬ್ರೇಕ್ ಮಾಡುವ ಅವಕಾಶವನ್ನು ಪಂತ್ ಹೊಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಆಟಗಾರರನ್ನು ಔಟ್ ಮಾಡಿರುವ ಭಾರತದ ವಿಕೆಟ್ ಕೀಪರ್‌ಗಳ ಪೈಕಿ ರಿಷಬ್ ಪಂತ್ ಮೂರನೇ ಸ್ಥಾನದಲ್ಲಿದ್ದಾರೆ. ಎಂಎಸ್ ಧೋನಿ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದ್ಲಿ ಮಾಜಿ ದಿಗ್ಗಜ ಸಯ್ಯದ್ ಕೀರ್ಮಾನಿ ಹೆಸರಿದೆ. ಕಿರ್ಮಾನಿ ಅವರು 88 ಪಂದ್ಯಗಳ 151 ಇನ್ನಿಂಗ್ಸ್‌ಗಳಲ್ಲಿ ಸ್ಟಂಪ್ ಹಿಂದೆ ನಿಂತು 198 ಆಟಗಾರರನ್ನು ಪೆವಿಲಿಯನ್ ಕಡೆ ಕಳುಹಿಸಿದ್ದಾರೆ. ಧೋನಿ 90 ಟೆಸ್ಟ್‌ಗಳಲ್ಲಿ 166 ಇನ್ನಿಂಗ್ಸ್‌ಗಳಲ್ಲಿ 294 ಆಟಗಾರರನ್ನು ಬಲಿ ಪಡೆದಿದ್ದಾರೆ. ಸದ್ಯದ ಅಂಕಿ-ಅಂಶಗಳ ಪ್ರಕಾರ ಪಂತ್ ಇದೇ ರೀತಿ ಪ್ರದರ್ಶನ ನೀಡಿದರೆ ಶೀಘ್ರದಲ್ಲೇ ಧೋನಿ ದಾಖಲೆಯ ಸನಿಹಕ್ಕೆ ಬರಲಿದ್ದಾರೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ರಿಷಬ್ ಪಂತ್ ಜವಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಮೊದಲ ಇನ್ನಿಂಗ್ಸ್‌ನ ಆರಂಭದಲ್ಲಿ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಯುವ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ಜೊತೆಗೂಡಿದ ಪಂತ್ ಭರ್ಜರಿ ಪ್ರದರ್ಶನ ತೋರಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ 52 ಎಸೆತಗಳಲ್ಲಿ 39 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇದಾದ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಪಂತ್ ಪರಕ್ರಮ ಮುಂದುವರೆಯಿತು. ಅವರು 128 ಎಸೆತಗಳಲ್ಲಿ 109 ರನ್ ಚಚ್ಚಿ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಇದಲ್ಲದೆ, ವಿಕೆಟ್ ಹಿಂದೆ ಪಂತ್ ಕೂಡ ಉತ್ತಮ ಪ್ರದರ್ಶನ ನೀಡಿದರು. ಇಂತಹ ಅದ್ಭುತ ಪ್ರದರ್ಶಕ್ಕಾಗಿ ಪಂದ್ಯದ ಗೆಲುವಿನ ನಂತರ ನಾಯಕ ರೋಹಿತ್ ಶರ್ಮಾ ಕೂಡ ಪಂತ್ ಅವರನ್ನು ಹೊಗಳಿದರು. ಇದೀಗ ಕಾನ್ಪುರ ಟೆಸ್ಟ್‌ನಲ್ಲಿ ಪಂತ್ ಪ್ರದರ್ಶನದ ಮೇಲೆ ಎಲ್ಲರಿಗೂ ಕುತೂಹಲ ಹೆಚ್ಚಾಗಿದೆ.