ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ 2 ಪಂದ್ಯಗಳ ಮೊದಲ ಟೆಸ್ಟ್ ಪಂದ್ಯ ನವೆಂಬರ್ 14 ರಂದು ಆರಂಭವಾಗಲಿದೆ. ಈ ಸರಣಿಗೂ ಮುನ್ನ ಭಾರತ "ಎ" ಹಾಗೂ ದಕ್ಷಿಣ ಆಫ್ರಿಕಾ "ಎ" ತಂಡಗಳು ಅನಧಿಕೃತ ಟೆಸ್ಟ್ ಪಂದ್ಯವನ್ನು ಆಡಿದವು. ಈ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ತಂಡದಲ್ಲಿ ಸ್ಥಾನ ಪಡೆದಿರುವ ಸ್ಟಾರ್ ಆಟಗಾರರು ಸಹ ತಂಡದಲ್ಲಿ ಸ್ಥಾನ ಪಡೆದಿದ್ದರು. ಇನ್ನು ನಾಯಕ ಶುಭಮನ್ ಗಿಲ್ ಸೇರಿದಂತೆ ಇನ್ನು ಹಲವು ಆಟಗಾರರು ಆಸ್ಟ್ರೇಲಿಯಾದಲ್ಲಿ ಟಿ20 ಸರಣಿಯನ್ನು ಆಡುತ್ತಿದ್ದರು.
ಭಾನುವಾರ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಕೊನೆಯ ಪಂದ್ಯದ ಮಳೆಗೆ ಆಹುತಿಯಾಗಿದೆ. ಈಗಾಗಲೇ ಟೀಮ್ ಇಂಡಿಯಾ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದ್ದರಿಂದ ಟಿ20 ಸರಣಿ ಗೆದ್ದಿದೆ. ಇತ್ತ ಬೆಂಗಳೂರಿನಲ್ಲಿ ದಕ್ಷಿಣ ಆಪ್ರಿಕಾ "ಎ" ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಈ ಮೂಲಕ ಆತಿಥೇಯ ತಂಡಕ್ಕೆ ಆಧಾರವಾಗಿದ್ದಾರೆ. ಇದೇ ವೇಳೆ ಭಾರತ "ಎ" ತಂಡದ ನಾಯಕ ರಿಷಭ್ ಪಂತ್, ಇದೇ ಪಂದ್ಯದ ವೇಳೆ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಕ್ರಿಸ್ ವೋಕ್ಸ್ ಎಸೆತದಲ್ಲಿ ಪಾದಕ್ಕೆ ಗಾಯ ಮಾಡಿಕೊಂಡಿದ್ದ ರಿಷಬ್ ಪಂತ್, ಮೂರು ತಿಂಗಳ ಬಳಿಕ ಮೈದಾನಕ್ಕೆ ಎಂಟ್ರಿ ನೀಡಿದ್ದಾರೆ. ಇವರಿಗೆ ತಮ್ಮ ಫಿಟ್ನೆಸ್ ಸಾಬೀತು ಪಡಿಸಲು ಅನಧಿಕೃತ ಟೆಸ್ಟ್ ಪಂದ್ಯ ಮಹತ್ವದಾಗಿತ್ತು. ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ 113 ಎಸೆತಗಳಲ್ಲಿ 90 ರನ್ ಬಾರಿಸಿ ತಾವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದರು. ಆದರೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇವರು ಗಾಯಕ್ಕೆ ತುತ್ತಾಗಿದ್ದು ತಂಡದ ಚಿಂತೆಯನ್ನು ಕೊಂಚ ಹೆಚ್ಚಿಸಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್, ಬ್ಯಾಟ್ ಮಾಡುವಾಗ ರಿಟೈಡ್ ಹರ್ಟ್ ಆಗಿದ್ದರು. ಆದರೆ ಬಳಿಕ ಮತ್ತೆ ಅಂಗಳಕ್ಕೆ ಬಂದು ಅರ್ಧಶತಕ ಬಾರಿಸಿದರು. ಆದರೆ ಪಂತ್ ಅವರ ಗಾಯ ಎಷ್ಟು ಗಂಭೀರವಾಗಿದೆ? ಇವರು ಟೀಮ್ ಇಂಡಿಯಾ ಪರ ಕಣಕ್ಕೆ ಇಳಿಯುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಕೋಲ್ಕತ್ತಾದಲ್ಲಿ ನವೆಂಬರ್ 14 ರಿಂದ 18ರ ವರೆಗೆ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಗುವಾಹಟಿಯಲ್ಲಿ ನವೆಂಬರ್ 22 ರಿಂದ 26 ರವರೆಗೆ ನಡೆಯಲಿದೆ.