ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20ರಿಂದ ಆರಂಭವಾಗಲಿದೆ. ಈ ಸರಣಿಗೆ ಟೀಮ್ ಇಂಡಿಯಾ ಆಟಗಾರರು ಭರದ ಸಿದ್ಧತೆ ನಡೆಸಿದ್ದಾರೆ. ಈ ಅಭ್ಯಾಸದ ವೇಳೆ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಇಂಗ್ಲೆಂಡ್ ಪ್ಲೇಯರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಬೌನ್ಸಿ ಟ್ರ್ಯಾಕ್ ಇದ್ದರೂ ಸಹ ತಾವು ಮೈಚಳಿ ಬಿಟ್ಟು ಆಡುವುದಾಗಿ ಬ್ಯಾಟ್ ಮಾಡಿದ್ದಾರೆ.
ಟೀಮ್ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅಭ್ಯಾಸದ ವೇಳೆ ಎಲ್ಲರ ಗಮನ ಸೆಳೆದಿದ್ದಾರೆ. ಇವರು ಅಭ್ಯಾಸವನ್ನು ಮಾಡುವ ವೇಳೆ ಮೈದಾನದ ಮೇಲ್ವಾವಣಿಗೆ ಹಾನಿ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಟೀಮ್ ಇಂಡಿಯಾದ ಆಟಗಾರರು ಸದ್ಯ ಇಂಗ್ಲೆಂಡ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ವೇಳೆ ವಿಕೆಟ್ ಕೀಪರ್ ರಿಷಭ್ ಪಂತ್ ಬಾನೆತ್ತರದ ಸಿಕ್ಸರ್ ಬಾರಿಸಿದರು. ರಿಷಭ್ ಪಂತ್, ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಇವರು ಬಾರಿಸಿದ ಚೆಂಡು ಮೈದಾನದ ಮೇಲ್ಛಾವಣಿಗೆ ಬಡಿಯಿತು. ಪರಿಣಾಮ ಮೆಲ್ಛಾವಣಿಗೆ ಹಾನಿಯಾಗಿದೆ.
ಈ ಸರಣಿಯಲ್ಲಿ ರಿಷಭ್ ಪಂತ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು ಶುಭಮನ್ ಗಿಲ್ ಪಡೆಯಲ್ಲಿ ಉಪನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈಗ ರಿಷಭ್ ಪಂತ್, ವಿಕೆಟ್ ಕೀಪಿಂಗ್, ಬ್ಯಾಟಿಂಗ್ ಜೊತೆಗೆ ಮತ್ತೊಂದು ಜವಾಬ್ದಾರಿ ನಿಭಾಯಿಸಲಿದ್ದಾರೆ. ರಿಷಭ್ ಪಂತ್ ಇಂಗ್ಲೆಂಡ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಆಟಗಾರ. ಇವರು ಆಡಿರುವ 17 ಇನಿಂಗ್ಸ್‌ಗಳಲ್ಲಿ 32ರ ಸರಾಸರಿಯಲ್ಲಿ 556 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 2 ಶತಕಗಳು ಸೇರಿವೆ.
ರಿಷಭ್ ಪಂತ್ ಇತ್ತೀಚಿಗೆ ಭಾರತದಲ್ಲಿ ನಡೆದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಆದರೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಇವರು 13 ಇನಿಂಗ್ಸ್‌ಗಳಲ್ಲಿ 269 ರನ್ ಕಲೆ ಹಾಕಿ ಟೀಕೆಗೆ ಗುರಿಯಾಗಿದ್ದರು. ಆದರೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಂತ್ ಅಬ್ಬರಿಸಿದ್ದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಪಂತ್ 11 ಬೌಂಡರಿ, 8 ಸಿಕ್ಸರ್ ಸಹಾಯದಿಂದ 61 ಎಸೆತಗಳಲ್ಲಿ ಅಜೇಯ 118 ರನ್ ಬಾರಿಸಿದ್ದರು. ಈ ಮೂಲಕ ಫಾರ್ಮ್‌ಗೆ ಮರಳಿದ್ದರು. ಈಗ ಇದೇ ಫಾರ್ಮ್ ಮುಂದುವರೆಸುವ ಯೋಚನೆಯಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಅನುಭವಿಗಳ ಅನುಪಸ್ತಿತಿ ಕಾಡಲಿದೆ. ಈ ಸವಾಲನ್ನು ಹೇಗೆ ಯುವ ತಂಡ ಮೆಟ್ಟಿ ನಿಲ್ಲುತ್ತದೆ ಎಂಬ ಪ್ರಶ್ನೆಗಳು ಎದ್ದಿವೆ. ಇನ್ನು ರಿಷಭ್ ಪಂತ್ ಈ ಸರಣಿಯಲ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಎಂಬ ಚರ್ಚೆಗಳು ಆರಂಭವಾಗಿವೆ. ವಿರಾಟ್ ಕೊಹ್ಲಿ ನಿವೃತ್ತಿಯಿಂದ ತೆರವಾದ ನಾಲ್ಕನೇ ಸ್ಥಾನದಲ್ಲಿ ಪಂತ್ ಆಡಿದರೆ ಸೂಕ್ತ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.