ಸ್ಯಾಂಡ್ ಪೇಪರ್ ತರೋದು ಮರೆತೆ: ಆಶಸ್ ಸರಣಿ ವಿಚಾರವಾಗಿ ಕಾಲೆಳೆದುಕೊಂಡ ಆಸ್ಟ್ರೇಲಿಯಾ, ಯುಕೆ ಪ್ರಧಾನಿಗಳು
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶಸ್ ಸರಣಿಯ ಕಾವು ಜೋರಾಗುತ್ತಲೇ ಇದೆ. ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆದ್ದ ಬಳಿಕ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸುವ ಮೂಲಕ ಸರಣಿಯ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇನ್ನು ಈ ಮುಖಾಮುಖಿ ಮೈದಾನದಲ್ಲಿನ ಪ್ರದರ್ಶನಗಳ ಜೊತೆಗೆ ಅಲ್ಲಿ ನಡೆಯುವ ಕೆಲ ಬೆಳವಣಿಗೆಗಳಿಂದಲೂ ಎಂದಿನಂತೆಯೇ ಚರ್ಚೆಯಲ್ಲಿದೆ. ಇದು ಎಷ್ಟರ ಮಟ್ಟಿಗೆ ಇದೆ ಎಂದರೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಈ ಎರಡು ರಾಷ್ಟ್ರಗಳ ಪ್ರಧಾನಿಗಳು ಮುಖಾಮುಖಿಯಾದಾಗಲೂ ಇದೇ ವಿಚಾರವಾಗಿ ಒಬ್ಬರನ್ನೊಬ್ಬರು ಕಾಲೆಳೆದುಕೊಂಡು ಸುದ್ದಿಯಾಗಿದ್ದಾರೆ.
ರಾಜಕಾರಣಿಗಳಿಬ್ಬರು ಪರಸ್ಪರ ಮುಖಾಮುಖಿಯಾದಾಗ ಕ್ರೀಡೆಯ ಬಗ್ಗೆ ಚರ್ಚೆ ನಡೆಸುವುದು ಅಪರೂಪ. ಆದರೆ ಆಶಸ್ ವಿಚಾರದಲ್ಲಿ ಅದು ಸುಳ್ಳಾಗಿದೆ. ಆಸ್ಟ್ರೇಲಿಯಾ ಹಾಗೂ ಯುಕೆ ಎರಡು ರಾಷ್ಟ್ರಗಳ ಪ್ರಧಾನಿಗಳು ಕೂಡ ಈ ಸರಣಿಯ ವಿಚಾರವಾಗಿ ತಮ್ಮ ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ ಈ ಘಟನೆ ನಡೆದಿದ್ದು ಇತ್ತೀಚೆಗೆ ಲಿಥುಯಾನಾದಲ್ಲಿ ನಡೆದ ನ್ಯಾಟೋ ಸಭೆಯೊಂದರಲ್ಲಿ. ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬೆನೀಸ್ ಮತ್ತು ಯುಕೆ ಪ್ರಧಾನಿ ರಿಶಿ ಸುನಾಕ್ ಪರಸ್ಪರ ಮುಖಾಮುಖಿಯಾದಾಗ ಪರಸ್ಪರ ಕಾಲೆಳೆದುಕೊಂಡಿದ್ದಾರೆ.
ರಿಶಿ ಸುನಾಕ್ vs ಆಂಟನಿ ಅಲ್ಬೆನೀಸ್
ಅಂದಹಾಗೆ ಇದನ್ನು ಮೊದಲಿಗೆ ಆರಂಭಿಸಿದ್ದು ಆಸ್ಟ್ರೇಲಿಯಾದ ಪ್ರಧಾನಿ ಅಲ್ಬೆನೀಸ್. A4 ಗಾತ್ರದ ಕಾಗದವೊಂದರಲ್ಲಿ ಆಸ್ಟ್ರೇಲಿಯಾದ ಪ್ರಧಾನಿ "2-1" ಎಂದು ಬರೆದಿರುವುದನ್ನು ರಿಶಿ ಸುನಾಕ್‌ಗೆ ತೋರಿಸಿ ಬಳಿಕ ಮಾಧ್ಯಮಗಳಿಗೆ ಪೋಸ್ ನೀಡಿದರು. ಈ ಮೂಲಕ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಮುನ್ನಡೆ ಸಾಧಿಸಿರುವುದನ್ನು ತೋರಿಸಿ ಕಾಲೆಳೆದರು. ಇದಕ್ಕೆ ಪ್ರತಿಯಾಗಿ ರಿಶಿ ಸುನಾಕ್ ಹೆಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದಾಗ ಮಾರ್ಕ್ ವುಡ್ ಹಾಗೂ ಕ್ರಿಸ್ ವೋಕ್ಸ್ ಸಂಭ್ರಮಿಸಿದ ಫೋಟೋವನ್ನು ತೋರಿಸಿದರು.
ಇದನ್ನು ನೋಡಿದ ಆಸ್ಟ್ರೇಲಿಯಾದ ಪ್ರಧಾನಿ ಅಲ್ಬೆನೀಸ್ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಜಾನಿ ಬೈರ್‌ಸ್ಟೋವ್ ವಿವಾದಾತ್ಮಕ ರೀತಿಯಲ್ಲಿ ಔಟಾದ ಕ್ಷಣದ ಫೋಟೋವನ್ನು ತೋರಿಸಿದರು. ಈ ಸಂದರ್ಭದಲ್ಲಿ ಸ್ವತಃ ರಿಷಿ ಸುನಾಕ್‌ಗೆ ಕೂಡ ನಗು ತಡೆಯಲಾಗಲಿಲ್ಲ. ಆದರೆ ಇದೇ ಸಂದರ್ಭದಲ್ಲಿ ರಿಷಿ ಸುನಾಕ್ "ಕ್ಷಮಿಸಿ ನಾನು ನನ್ನ ಸ್ಯಾಂಡ್ ಪೇಪರ್ ತರಲಿಲ್ಲ" ಎಂದು ಆಸಿಸ್ ಪ್ರಧಾನಿಯ ಕಾಲೆಳೆದರು. ಈ ಮೂಲಕ 2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕುಖ್ಯಾತ ಸ್ಯಾಂಡ್ ಪೇಪರ್ ವಿವಾದವನ್ನು ನೆನಪಿಸಿ ಮುಜುಗರಪಡಿಸುವ ಪ್ರಯತ್ನ ನಡೆಸಿದ್ದಾರೆ ರಿಷಿ ಸುನಾಕ್.
ಕುತೂಹಲ ಮೂಡಿಸಿದ ನಾಲ್ಕನೇ ಟೆಸ್ಟ್
ಆಶ್ ಸರನಿಯ ಮೂರು ಪಂದ್ಯಗಳು ಈಗ ಮುಕ್ತಾಯವಾಗಿದ್ದು ನಾಲ್ಕನೇ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯಕ್ಕೆ ಇನ್ನೂ ಒಂದು ವಾರಗಳ ಸಮಯಾವಕಾಶವಿದ್ದು ಆಟಗಾರರು ಈ ಪಂದ್ಯಕ್ಕೆ ಸಿದ್ಧತೆ ನಡೆಸಲು ಆರಂಭಿಸಿದ್ದಾರೆ. ನಾಲ್ಕನೇ ಪಂದ್ಯ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣಲ್ಲಿ ನಡೆಯಲಿದ್ದು ಜೂನ್ 19ರಿಂದ ಆರಂಭವಾಗಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸುವ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ತಂಡ ಇದ್ದರೆ ಆಸ್ಟ್ರೇಲಿಯಾ ಸರಣಿಯನ್ನು ವಶಕ್ಕೆ ಪಡೆಯುವ ಕಾತರದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications