ಕೋಚ್ ಆಗಿ ರವಿ ಶಾಸ್ತ್ರಿ ಸಾಧನೆಯೇನು? ಎಂದು ಪ್ರಶ್ನಿಸಿದ ರಾಬಿನ್ ಸಿಂಗ್

ಹೊಸದಿಲ್ಲಿ, ಜುಲೈ 29: ಭಾರತ ತಂಡ ಹಾಲಿ ಕೋಚ್ ರವಿ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಸತತ ಎರಡು ಬಾರಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತದಲ್ಲಿ ಮುಗ್ಗರಿಸಿದ್ದು, ಟೀಮ್ ಇಂಡಿಯಾದ ತರಬೇತಿ ಬಳಗವನ್ನು ಬದಲಾಯಿಸಬೇಕು ಎಂದು ಮಾಜಿ ಆಲ್‌ರೌಂಡರ್ ರಾಬಿನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
"ಈಗಿನ ಕೋಚ್ ರವಿ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಸತತ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ ಸೆಮಿಫೈನಲ್ ಹಂತದಲ್ಲಿ ಸೋತಿದೆ. ಇನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲೂ ಅಂತಿಮ ನಾಲ್ಕರ ಘಟದಲ್ಲಿ ಭಾರತ ಹೊರಬಿದ್ದಿದೆ. ಇದೀಗ 2023ರ ವಿಶ್ವಕಪ್ ಟೂರ್ನಿಗೆ ಸಜ್ಜಾಗಬೇಕಿದ್ದು, ಕೋಚ್ ಬದಲಾವಣೆ ಉತ್ತಮ," ಎಂದು ಸಂದರ್ಶನವೊಂದರಲ್ಲಿ ಸಿಂಗ್ ಹೇಳಿದ್ದಾರೆ. ಕೋಚ್ ಆಗಿ ರವಿ ಶಾಸ್ತ್ರಿ ಸಾಧಿಸಿರುವುದು ಏನು ಎಂದು ಇದೇ ಸಂದರ್ಭದಲ್ಲಿ ರಾಬಿನ್ ಪ್ರಶ್ನಿಸಿದ್ದಾರೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಜಂಟಿ ಆತಿಥ್ಯದಲ್ಲಿ ನಡೆದ 2015ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತು ಸ್ಪರ್ಧೆಯಿಂದ ಹೊರಬಿದ್ದಿತ್ತು. ಇನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆದ 2019ರ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿತ್ತು. ಅಂತೆಯೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ನಾಕ್‌ಔಟ್ ಹಂತಕ್ಕೆ ಕಾಲಿಟ್ಟಿತ್ತಾದರೂ, ನ್ಯೂಜಿಲೆಂಡ್ ವಿರುದ್ಧ ಅಚ್ಚರಿಯ ಸೋಲುಂಡು ತನ್ನ ಸಭಿಯಾನ ಅಂತ್ಯಗೊಳಿಸಿತ್ತು.

ಫೀಲ್ಡಿಂಗ್ ಕೋಚ್ ಆಗಿದ್ದ ರಾಬಿನ್
ರಾಬಿನ್ ಸಿಂಗ್ 2007ರಿಂದ 2009ರವರೆಗೆ ಭಾರತ ತಂಡದ ಕೋಚಿಂಗ್ ವಿಭಾಗದ ಸಹಾಯಕ ಸಿಬ್ಬಂದಿ ತಂಡದಲ್ಲಿದ್ದು ಫೀಲ್ಡಿಂಗ್ ಕೋಚ್ ಜವಾಬ್ದಾರಿ ನಿಭಾಯಿಸಿದ್ದರು. ಇದೀಗ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ರಾಬಿನ್ ಅವರ ಅಧಿಕಾರ ಅವಧಿಯಲ್ಲಿ ಭಾರತ ತಂಡ 2007ರಲ್ಲಿ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಗೆದ್ದರೆ, ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ತ್ರಿಕೋನ ಏಕದಿನ ಕ್ರಿಕೆಟ್ ಸರಣಿ ಗೆದ್ದಿತ್ತು. ಅಷ್ಟೇ ಅಲ್ಲದೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಜಯ ದಾಖಲಿಸಿತ್ತು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಫೀಲ್ಡಿಂಗ್ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ರಾಬಿನ್ ಸಿಂಗ್ ಏಕದಿನ ಕ್ರಿಕೆಟ್ ಸಾಧನೆ
136 ಪಂದ್ಯ
2336 ರನ್
100 ಗರಿಷ್ಠ
25.95 ಸರಾಸರಿ
74.30 ಸ್ಟ್ರೈಕ್‌ರೇಟ್
01 ಶತಕ
09 ಅರ್ಧಶತಕ
69 ವಿಕೆಟ್
22ಕ್ಕೆ 5 ಶ್ರೇಷ್ಠ ಸಾಧನೆ

ವಿಂಡೀಸ್ ಪ್ರವಾಸದ ಬಳಿಕ ಕೋಚ್ ಆಯ್ಕೆ
ಭಾರತ ತಂಡ ಇದೀಗ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಲಿ ಕೋಚ್ ರವಿ ಶಾಸ್ತ್ರಿ ಮತ್ತು ತರಬೇತಿ ಬಳಗದ ಜೊತೆಗಿನ ಒಪ್ಪಂದವನ್ನು ಬಿಸಿಸಿಐ 45 ದಿನಗಳಿಗೆ ವಿಸ್ತರಿಸಿದೆ. ಹೀಗಾಗಿ ಈ ಸರಣಿ ಬಳಿಕ ಟೀಮ್ ಇಂಡಿಯಾದ ನೂತನ ಕೋಚ್ ನೇಮಕದ ಕಾರ್ಯ ನಡೆಯಲಿದೆ. ರವಿ ಶಾಸ್ತ್ರಿ ಭಾರತ ತಂಡದ ಪ್ರಧಾನ ಕೋಚ್ ಆಗಿದ್ದು, ಸಂಜಯ್ ಬಾಂಗರ್ ಸಹಾಯಕ ಕೋಚ್, ಆರ್ ಶ್ರೀಧರ್ ಫೀಲ್ಡಿಂಗ್ ಕೋಚ್ ಹಾಗೂ ಭರತ್ ಅರುಣ್ ಬೌಲಿಂಗ್ ಕೋಚ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ವೇಳೆ ನೂತನ ಕೋಚ್ ಆಯ್ಕೆ ವಿಚಾರದಲ್ಲಿ ಸಲಹೆ ನೀಡುವಂತೆ ಬಿಸಿಸಿಐನ ಆಡಳಿತ ಸಮಿತಿಯು (ಸಿಒಎ) ಮಾಜಿ ನಾಯಕ ಕಪಿಲ್ ದೇವ್ ಅವರ ಸಾರಥ್ಯದ ಕ್ರಿಕೆಟ್ ಸಲಹಾ ಸಮಿತಿಗೆ ಜವಾಬ್ದಾರಿ ವಹಿಸಿದೆ.

ಪ್ರಧಾನ ಕೋಚ್ ಹುದ್ದೆಗೆ ದಿಗ್ಗಜರ ಅರ್ಜಿ
ಹಲವು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಅಂದಹಾಗೆ ಶಾಸ್ತ್ರಿ ಮತ್ತು ಬಳಗವೂ ಕೂಡ ಮರಳಿ ಕೋಚ್ ಹುದ್ದೆಗೆ ನೇರವಾಗಿ ಸ್ಪರ್ಧಿಸಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಶ್ರೀಲಂಕಾದ ದಿಗ್ಗಜ ಮಹೇಲಾ ಜಯವರ್ಧನೆ, ಆಸ್ಟ್ರೇಲಿಯಾದ ಟಾಮ್ ಮೂಡಿ ಹಾಗೂ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅರ್ಜಿ ಸಲ್ಲಿಸಿದ್ದಾರೆ. ಕರ್ಸ್ಟನ್ ಮಾರ್ಗದರ್ಶನದಲ್ಲಿ ಭಾರತ ತಂಡ 2011ರ ವಿಶ್ವಕಪ್ ಗೆದ್ದಿತ್ತು. ಇದೀಗ ಮರಳಿ ಕೋಚ್ ಹುದ್ದೆಗೆ ಪ್ರಯತ್ನಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications