ಟೀಮ್ ಇಂಡಿಯಾದ ಅನುಭವಿ ಆಟಗಾರರು ಸದ್ಯ ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಸೇರಿದಂತೆ ಅನೇಕ ಸ್ಟಾರ್ ಆಟಗಾರರು ಮೈದಾನಕ್ಕೆ ಪ್ರವೇಶಿಸಿದ್ದರು. 10 ವರ್ಷಗಳ ಬಳಿಕ ದೇಶೀಯ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಆಡಿದ್ದ ರೋಹಿತ್ ಮೊದಲ ಇನಿಂಗ್ಸ್‌ನಲ್ಲಿ ವಿಶೇಷವಾದದ್ದನ್ನು ಏನು ಮಾಡಲಿಲ್ಲ. ಆದರೆ ಎರಡನೇ ಇನಿಂಗ್ಸ್‌ನಲ್ಲಿ ತಮ್ಮ ನೈಜ ಆಟವನ್ನು ಆಡಿದರು. ಈ ಮೂಲಕ ಅಭಿಮಾನಿಗಳ ಗಮನ ಸೆಳೆದರು. ರಣಜಿ ಟ್ರೋಫಿಯ ಮುಂದಿನ ಪಂದ್ಯ ಜನವರಿ 30 ರಿಂದ ಆರಂಭವಾಗಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಸದ್ಯಕ್ಕೆ ಬರುತ್ತಿರುವ ಸುದ್ದಿಯ ಪ್ರಕಾರ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಮುಂದಿನ ರಣಜಿ ಪಂದ್ಯವನ್ನು ಆಡುವುದು ಕಷ್ಟ ಎಂದು ತಿಳಿದು ಬಂದಿದೆ. ಇದಕ್ಕೆ ಕಾರಣ ಸಿಂಪಲ್ ಆಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದ್ದು, ಇದಾದ ಬಳಿಕ ಉಭಯ ದೇಶಗಳ ನಡುವಣ ಏಕದಿನ ಸರಣಿಗಳು ಆರಂಭವಾಗುತ್ತವೆ. ಈ ಸರಣಿಗೆ ಆಟಗಾರರು ಅಭ್ಯಾಸ ಆರಂಭಿಸಬೇಕಾಗುತ್ತದೆ. ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಮುಂದಿನ ಪಂದ್ಯ ಮೇಘಾಲಯ ವಿರುದ್ಧ ನಡೆಯಲಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಸರಣಿ ಏಕದಿನ ಸರಣಿ ಫೆಬ್ರವರಿ 6 ರಿಂದ ಪ್ರಾರಂಭವಾಗಲಿದೆ. ರೋಹಿತ್ ಶರ್ಮಾ ಈ ಸರಣಿಗೆ ತಯಾರಿ ನಡೆಸುತ್ತಾರೆ. ಹೀಗಾಗಿ ರಣಜಿ ಟ್ರೋಫಿ ಆಡಲು ಕಷ್ಟವಾಗುತ್ತದೆ. ಇನ್ನು ರಣಜಿ ಟ್ರೋಫಿ ಟೆಸ್ಟ್ ಫಾರ್ಮೆಟ್‌ನಲ್ಲಿ ನಡೆಯಲಿವೆ. ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಮುಂದಿನ ರಣಜಿ ಪಂದ್ಯದಲ್ಲಿ ಆಡುವುದು ಕಷ್ಟ. ಈ ಆಟಗಾರರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ ಚಾಂಪಿಯನ್ಸ್ ಟ್ರೋಫಿಗೆ ಆಡಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಮುಂದಿನ ತಿಂಗಳು ಫೆಬ್ರವರಿಯಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಸೇರಿದಂತೆ ಒಟ್ಟು 8 ತಂಡಗಳು ಭಾಗವಹಿಸಲಿವೆ. ಏಳು ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ವೇಳೆ ಭಾರತದ ಆಟಗಾರರು ಯಾವುದೇ ರೀತಿಯ ಗಾಯವಾಗದೇ ಇರುವಂತೆ ನೋಡಿಕೊಳ್ಳುವುದು ಮುಖ್ಯ.

ಐಸಿಸಿ ಪ್ರಶಸ್ತಿಯನ್ನು ಮತ್ತೊಮ್ಮೆ ಗೆಲ್ಲುವ ನಿಟ್ಟಿನಲ್ಲಿ ಮೈದನಾದಲ್ಲಿ ಶ್ರಮಿಸಬೇಕಿದೆ. ಹೀಗಾಗಿ ಆಟಗಾರರು ಫಿಟ್ ಆಗಿರುವುದು ಪಕ್ಕಾ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದ ತಂಡದಿಂದ ಎಷ್ಟು ಆಟಗಾರರು ಮುಂದಿನ ರಣಜಿ ಪಂದ್ಯದಲ್ಲಿ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಮುಂದಿನ ರಣಜಿ ಟೂರ್ನಿಯ ಪಂದ್ಯಕ್ಕೆ ಕರ್ನಾಟಕದ ಪರ ಕೆಎಲ್ ರಾಹುಲ್ ಮೈದಾನಕ್ಕೆ ಇಳಿಯುವ ಸಾಧ್ಯತೆ ಇದೆ. ಇವರು ಆಡುವ 17 ಜನರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಸಹ ಈ ಪಂದ್ಯದಲ್ಲಿ ಅಂಗಳ ಪ್ರವೇಶಿಸಬಹುದು ಎಂದು ನಂಬಲಾಗಿದೆ.