ತವರಿನಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ ಕೊನೆಯವರೆಗೂ ಅಜೇಯವಾಗಿದ್ದ ಟೀಮ್ ಇಂಡಿಯಾ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ರೀತಿ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯ ಘಾಸಿಗೊಳಿಸಿತು.
ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಇತರ ಕೆಲವು ಹಿರಿಯ ಆಟಗಾರರು ತಮ್ಮ ಹೆಸರಿಗೆ ವಿಶ್ವಕಪ್ ಪ್ರಶಸ್ತಿಯನ್ನು ಸೇರಿಸಲು ಕೊನೆಯ ಅವಕಾಶವಾಗಿತ್ತು. ಆದರೆ, ನಿರ್ಗಮನವು ನೋವಿನಿಂದ ಕೂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದೀಗ ವಿಶ್ವಕಪ್ ಸೋಲಿನ ನಂತರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮೊದಲ ನಿಯೋಜನೆಗೆ ಹಿಂತಿರುಗುತ್ತಿದ್ದಾರೆ. ಇದೇ ವೇಳೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು 'ನಿರಾಶೆ' ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 2-ಪಂದ್ಯಗಳ ಟೆಸ್ಟ್ ಸರಣಿಯ ಭಾರತದ ಮುಂದಿನ ಕಾರ್ಯಯೋಜನೆಯ ಮೊದಲು 'ಮುಂದುವರಿಯುವ' ಅಗತ್ಯದ ಬಗ್ಗೆ ಮಾತನಾಡಿದ್ದಾರೆ.
"ಅದು ಹಿಂದೆ ಸಂಭವಿಸಿದೆ, ಹೌದು ನಿರಾಶಾದಾಯಕವಾಗಿದೆ. ಆದರೆ ನಾವು ಅದರಿಂದ ಮುಂದೆ ಬಂದಿದ್ದೇವೆ. ಈಗ ನಿಮ್ಮ ಮುಂದಿರುವ ಯೋಜನೆಗಳ ಬಗ್ಗೆ ಕೇಂದ್ರಿಕರಿಸಬೇಕಾಗುತ್ತದೆ. ಆಟಗಾರರು ಅದರಲ್ಲಿ ಉತ್ತಮವಾಗಿ ಮುಂದುವರೆಯುತ್ತಿದ್ದಾರೆ. ನಾವು ಹಿಂದಿನ ಘಟನೆಯನ್ನು ಮರೆತು ಮುಂದೆ ಸಾಗುವುದನ್ನು ಮಕ್ಕಳಾಗಿರುವಾಗಿನಿಂದ ಹೇಗೆ ಮಾಡಬೇಕೆಂದು ಕಲಿತಿದ್ದೇವೆ," ಎಂದು ರಾಹುಲ್ ದ್ರಾವಿಡ್ ಹೇಳಿದರು.

"ಪ್ರತಿ ಬಾರಿ ಔಟಾದಾಗಲೂ ನಿರಾಸೆಯಾಗುತ್ತದೆ. ಇನ್ನೊಂದು ಇನ್ನಿಂಗ್ಸ್ ಆಡಬೇಕು, ಮುಂದಿನ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಹೀಗಾಗಿ ಹಿಂದಿನ ನಿರಾಸೆ ನಮ್ಮಲ್ಲಿ ಉಳಿಯಲು ಸಾಧ್ಯವಿಲ್ಲ. ಕ್ರಿಕೆಟಿಗರಾಗಿ, ಅದನ್ನು ಹೇಗೆ ಎದುರಿಸಬೇಕೆಂದು ಚಿಕ್ಕಂದಿನಿಂದಲೇ ಕಲಿಯುತ್ತೀರಿ. ಹಿಂದಿನ ನಿರಾಸೆಯನ್ನು ನಿಮ್ಮೊಂದಿಗೆ ಇರಲು ಬಿಟ್ಟರೆ, ಅದು ಮುಂದಿನ ಪಂದ್ಯದಲ್ಲಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ," ಎಂದು ರಾಹುಲ್ ದ್ರಾವಿಡ್ ಭಾನುವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ಹೌದು, ನಮ್ಮ ಹುಡುಗರಿಗೆ ನಿರಾಶೆಯಾಗಿದೆ, ನಾವೆಲ್ಲರೂ ನಿರಾಶೆಗೊಂಡಿದ್ದೇವೆ. ಆದರೆ ನಾವೆಲ್ಲರೂ ಈಗ ಅದರಿಂದ ಮುಂದೆ ಬಂದಿದ್ದೇವೆ ಮತ್ತು ನಮ್ಮ ಮುಂದಿರುವ ಯೋಜನೆಯನ್ನು ನಾವು ಎದುರು ನೋಡುತ್ತಿದ್ದೇವೆ," ಎಂದು ರಾಹುಲ್ ದ್ರಾವಿಡ್ ತಿಳಿಸಿದರು.
ಭಾರತ ತಂಡ ಇನ್ನೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಕೆಲವು ಆಟಗಾರರು ಭಾರವಾದ ಹೃದಯದಿಂದ ಸರಣಿಗೆ ಬರಲು ಬದ್ಧರಾಗಿದ್ದರೂ, ಆಟಗಾರರು ಉತ್ತಮವಾಗಿ ಕಾರ್ಯನಿರ್ವಹಿಸಲು ಯಾವುದಾದರೂ ಪ್ರೇರಣೆ ಬೇಕು ಎಂಬುದಕ್ಕೆ ರಾಹುಲ್ ದ್ರಾವಿಡ್ ಒಪ್ಪಲಿಲ್ಲ.
"ಭಾರತ ತಂಡಕ್ಕಾಗಿ ಆಡಲು ನೀವು ಆಟಗಾರರನ್ನು ಪ್ರೇರೇಪಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ಯಾವುದೇ ಆಟಗಾರರಿಗೆ ಪ್ರೇರಣೆಯ ಕೊರತೆಯಿದೆ ಎಂದು ನಾನು ಭಾವಿಸುವುದಿಲ್ಲ," ಎಂದು ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ಅಭಿಪ್ರಾಯಪಟ್ಟರು.
ದಕ್ಷಿಣ ಆಫ್ರಿಕಾದಲ್ಲಿ ಆಡಲು ಬಂದಿರುವುದು, ನಿಮ್ಮ ದೇಶವನ್ನು ಪ್ರತಿನಿಧಿಸುವುದು, ಇಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದು ಉತ್ತಮ ಕ್ರಿಕೆಟ್ ಆಡಲು ಅವಕಾಶವಿದೆ. ಯಾರೊಬ್ಬರಿಗೂ ಪ್ರೇರಣೆಯ ಕೊರತೆಯಿದೆ ಎಂದು ನಾನು ಭಾವಿಸುವುದಿಲ್ಲ. ನಾನು ಯಾರನ್ನೂ ಪ್ರೇರೇಪಿಸುವ ಅಗತ್ಯವಿಲ್ಲ. ನಮ್ಮ ಆಟಗಾರರು ಪ್ರಬುದ್ಧರಿದ್ದಾರೆ ಎಂದರು.
"ನನ್ನ ಆಟಗಾರರನ್ನು ಪ್ರೇರೇಪಿಸುವುದರಲ್ಲಿ ನನಗೆ ನಂಬಿಕೆಯಿಲ್ಲ. ಸರಿಯಾದ ವಾತಾವರಣವನ್ನು ಸೃಷ್ಟಿಸುವುದು, ಸರಿಯಾದ ಪ್ರಕ್ರಿಯೆಗಳನ್ನು ಖಾತ್ರಿಪಡಿಸುವುದು, ನಾವು ಚೆನ್ನಾಗಿ ಅಭ್ಯಾಸ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು, ದೈಹಿಕವಾಗಿ, ಮಾನಸಿಕವಾಗಿ ಮತ್ತು ತಂತ್ರವಾಗಿ ಎಲ್ಲಾ ಬಾಕ್ಸ್‌ಗಳನ್ನು ಟಿಕ್ ಮಾಡುವುದರಲ್ಲಿ ನಾನು ನಂಬುತ್ತೇನೆ. ಇದು ನಿಜವಾಗಿಯೂ ಕೋಚ್ ಆಗಿ ನನ್ನ ಕೆಲಸ," ಎಂದು ಹೇಳಿದರು.
"ಆಟಗಾರರಿಗೆ ಯಶಸ್ವಿಯಾಗಲು ಉತ್ತಮ ಅವಕಾಶವನ್ನು ನೀಡಬೇಕು. ನಮ್ಮ ತಂಡದಲ್ಲಿ ನಿಜವಾಗಿಯೂ ಕೆಲವು ಪ್ರೇರಿತ ವ್ಯಕ್ತಿಗಳು ಇದ್ದಾರೆ," ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟರು.