ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿತ್ತು. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ರನ್ ಮಳೆ ಹರಿಸಿದ್ದರು. ಈ ಸರಣಿಯ ವೇಳೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪ್ರದರ್ಶನದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಈ ಸರಣಿಯಲ್ಲಿ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡಿದ್ದರು. ಆಡಿದ ಮೂರು ಪಂದ್ಯಗಳಲ್ಲಿ ಅಬ್ಬರ ನಡೆಸಿದ್ದರು. ಪರಿಣಾಮ ಇವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಇವರು ಆಡಿದ ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿದ್ದರು. ರೋಹಿತ್ ಅವರ ಈ ಆಟವನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ರೋಹಿತ್ ಹಾಗೂ ವಿರಾಟ್ ಆಟವನ್ನು ಮತ್ತೆ ನೋಡಬೇಕು ಎನ್ನುವಂತೆ ಇತ್ತು. ಆದರೆ ಈ ಇಬ್ಬರೂ ಆಟಗಾರರು ಟಿ20 ಹಾಗೂ ಟೆಸ್ಟ್‌ಗೆ ವಿದಾಯ ಹೇಳಿದ್ದರಿಂದ, ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಮೈದಾನಕ್ಕೆ ಇಳಿಯಲಿದ್ದಾರೆ. ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಈ ಇಬ್ಬರೂ ಸ್ಟಾರ್ ಆಟಗಾರರು ಮೈದಾನ ಪ್ರವೇಶಿಸಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ಈಗ ಬರುತ್ತಿರುವ ವರದಿಗಳು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ "ಎ" ತಂಡದ ವಿರುದ್ಧ ಭಾರತ "ಎ' ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ವೇಳೆ ರೋಹಿತ್ ಹಾಗೂ ವಿರಾಟ್ ಅಂಗಳ ಪ್ರವೇಶಿಸಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಈ ಆಸೆ ಕೊಂಚ ಕಮರಿದಂತೆ ಕಾಣುತ್ತಿದೆ. ಕ್ರಿಕ್‌ಬಜ್ ಪ್ರಕಾರ, ಇಬ್ಬರೂ ಆಟಗಾರರು ಭಾರತ ಎ ಸರಣಿಯಲ್ಲಿ ಆಡುವುದು ಡೌಟ್ ಎನ್ನಲಾಗುತ್ತಿದೆ. ಭಾರತ "ಎ" ವಿರುದ್ಧ ದಕ್ಷಿಣ ಆಫ್ರಿಕಾ "ಎ" ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ನ.13 ರಂದು, 2ನೇ ಪಂದ್ಯ 16 ರಂದು, 3ನೇ ಪಂದ್ಯ 19 ರಂದು ನಡೆಯಲಿದೆ.
ಈ ಸರಣಿಗಾಗಿ ಇನ್ನು ಭಾರತ ತಂಡವನ್ನು ಪ್ರಕಟಿಸಿಲ್ಲ. ಈ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಶೀಘ್ರದಲ್ಲಿ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಸರಣಿಗೆ ಆಯ್ಕೆ ಸಮಿತಿ ವಿಭಿನ್ನ ಪ್ಲ್ಯಾನ್ ಹೊಂದಿದೆ ಎಂದು ತಿಳಿದು ಬಂದಿದೆ. ವಿರಾಟ್ ಹಾಗೂ ರೋಹಿತ್ ಅವರನ್ನು ಈ ಸರಣಿಯಲ್ಲಿ ಸೇರಿಸುವುದಿಲ್ಲ ಎಂದು ನಂಬಲಾಗಿದೆ. ಆದರೆ ಈ ಇಬ್ಬರೂ ಸೂಪರ್ ಸ್ಟಾರ್‌ಗಳು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಕಣಕ್ಕೆ ಇಳಿಯುವುದು ಕನ್ಫರ್ಮ್. ಉಭಯ ದೇಶಗಳ ನಡುವಣ ಮೊದಲ ಪಂದ್ಯ ನ.30 ರಂದು ನಡೆಯಲಿದೆ.

ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಸ್ಥಿರ ಪ್ರದರ್ಶನ ನೀಡಿದ ಪರಿಣಾಮ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟರ್ ಆಗಿದ್ದಾರೆ. ಹೀಗಾಗಿ ಇವರ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.