ಸದ್ಯ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿ ಗಮನದಲ್ಲಿಟ್ಟುಕೊಂಡಿದೆ. ಅದಕ್ಕಾಗಿ ತಂಡದ ಸಂಯೋಜನೆಯನ್ನು ಈಗಿನಿಂದಲೇ ಆರಂಭಿಸಿದೆ. ಆದರೂ ಟೀಮ್ ಇಂಡಿಯಾ ನಾಯಕತ್ವದ ಬಗ್ಗೆ ಹಲವು ಗೊಂದಲಗಳು ಮುಂದುವರೆದಿವೆ.
ಖಾಯಂ ನಾಯಕ ರೋಹಿತ್ ಶರ್ಮಾ ಅವರು 2022ರ ಟಿ20 ವಿಶ್ವಕಪ್ ನಂತರ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ. ಇದೇ ವೇಳೆ, ಹಾರ್ದಿಕ್ ಪಾಂಡ್ಯ ಚುಟುಕು ಸ್ವರೂಪದಲ್ಲಿ ನಾಯಕನಾಗಲು ಮುಂಚೂಣಿಯಲ್ಲಿ ಹೊರಹೊಮ್ಮಿದಂತೆ ಕಾಣುತ್ತಿದ್ದಾರೆ.

ಆದರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಮೊದಲು, ವರದಿಗಳ ಪ್ರಕಾರ, ಬಿಸಿಸಿಐ ಆಯ್ಕೆಗಾರರು ರೋಹಿತ್ ಶರ್ಮಾ ಅವರನ್ನು ಟಿ20 ನಾಯಕತ್ವಕ್ಕಾಗಿ ಸಂಪರ್ಕಿಸಿದರು.
ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್‌ಬಾಲ್ ಸರಣಿಯಿಂದ ವಿಶ್ರಾಂತಿ ತೆಗೆದುಕೊಂಡರೂ, ಅವರು ಇನ್ನೂ 2024ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಲು ಅರ್ಹರಾಗಿರುತ್ತಾರೆ. ಗೌತಮ್ ಗಂಭೀರ್ ಈ ವಿಷಯದ ಬಗ್ಗೆ ತಮ್ಮ ಪ್ರಾಮಾಣಿಕ ಪ್ರತಿಕ್ರಿಯೆ ನೀಡಿದ್ದಾರೆ.
ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದರೆ, 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಬೇಕು ಎಂದು 42ರ ಹರೆಯದ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

"ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದರೆ, ಅವರು ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಬೇಕು ಅಥವಾ ಅವರು ಉತ್ತಮ ಫಾರ್ಮ್‌ನಲ್ಲಿಲ್ಲದಿದ್ದರೆ, ಉತ್ತಮ ಫಾರ್ಮ್‌ನಲ್ಲಿಲ್ಲದವರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಬಾರದು," ಎಂದು ಗೌತಮ್ ಗಂಭಿರ್ ಖಡಕ್ಕಾಗಿ ಮಾತನಾಡಿದರು.
"ನಾಯಕತ್ವ ಎನ್ನುವುದು ಜವಾಬ್ದಾರಿ. ಮೊದಲಿಗೆ, ನಿಮ್ಮನ್ನು ಆಟಗಾರನಾಗಿ ಆಯ್ಕೆ ಮಾಡಿಕೊಳ್ಳಿ. ನಂತರ ನಿಮ್ಮನ್ನು ನಾಯಕನನ್ನಾಗಿ ಮಾಡುತ್ತಾರೆ. ನಾಯಕನು ಆಡುವ ಹನ್ನೊಂದರ ಬಳಗದಲ್ಲಿ ಶಾಶ್ವತ ಸ್ಥಾನವನ್ನು ಹೊಂದಿರಬೇಕು ಮತ್ತು ಶಾಶ್ವತ ಸ್ಥಾನವು ಫಾರ್ಮ್ ಅನ್ನು ಅವಲಂಬಿಸಿರುತ್ತದೆ," ಎಂದು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಎಎನ್‌ಐಗೆ ತಿಳಿಸಿದರು.
2011ರ ಏಕದಿನ ವಿಶ್ವಕಪ್ ವಿಜೇತರು ಗೌತಮ್ ಗಂಭೀರ್ ಮಾತು ಮುಂದುವರೆಸಿ, ಆಟಗಾರನನ್ನು ತಂಡದಿಂದ ಕೈಬಿಡುವಾಗ ವಯಸ್ಸು ಮಾನದಂಡವಾಗಬಾರದು ಮತ್ತು ಫಾರ್ಮ್ ಮಾತ್ರ ಮಾನದಂಡವಾಗಿರಬೇಕು ಎಂದು ಹೇಳಿದರು.
"ಆಟಗಾರನನ್ನು ಏಕೆ ಕೈಬಿಡಬೇಕು ಅಥವಾ ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ವಯಸ್ಸು ಮಾನದಂಡವಾಗಿರಬಾರದು, ಕೇವಲ ಆಟಗಾರನ ಫಾರ್ಮ್ ಮಾತ್ರ ಮಾನದಂಡವಾಗಿರಬೇಕು. ಆಟಗಾರನ ನಿವೃತ್ತಿಯು ವೈಯಕ್ತಿಕ ನಿರ್ಧಾರವಾಗಿದೆ, ಯಾರೂ ಅವನನ್ನು (ಆಟಗಾರ) ನಿವೃತ್ತಿಯಾಗುವಂತೆ ಒತ್ತಾಯಿಸಲು ಸಾಧ್ಯವಿಲ್ಲ," ಎಂದರು.
"ಆಯ್ಕೆದಾರರು ಆಟಗಾರನನ್ನು ಆಯ್ಕೆ ಮಾಡದಿರುವ ಎಲ್ಲಾ ಹಕ್ಕುಗಳನ್ನು ಹೊಂದಿರುತ್ತಾರೆ. ಆದರೆ ಅಂತಿಮವಾಗಿ ಒಬ್ಬ ಆಟಗಾರನಿಂದ ಬ್ಯಾಟ್ ಅಥವಾ ಚೆಂಡನ್ನು ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಫಾರ್ಮ್ ಪ್ರಮುಖ ಆದ್ಯತೆಯಾಗಿದೆ," ಎಂದು ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ ತಿಳಿಸಿದರು.
ರೋಹಿತ್ ಶರ್ಮಾ 2023ರ ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಹೊಂದಿದ್ದರು ಮತ್ತು ಆರಂಭಿಕ ಆಟಗಾರನಾಗಿ ಟೀಮ್ ಇಂಡಿಯಾಗೆ ನಿರ್ಣಾಯಕ ಪಾತ್ರ ವಹಿಸಿದ್ದರು. 36 ವರ್ಷದ ಬಲಗೈ ಬ್ಯಾಟರ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಿದ್ದರು.
ರೋಹಿತ್ ಶರ್ಮಾ ಆಡಿದ ಪಂದ್ಯಗಳಲ್ಲಿ ಭಾರತ ತಂಡದ ಇನ್ನಿಂಗ್ಸ್‌ಗೆ ಆರಂಭಿಕ ವೇಗವನ್ನು ನಿಗದಿಪಡಿಸಿದರು ಮತ್ತು 11 ಇನ್ನಿಂಗ್ಸ್‌ಗಳಲ್ಲಿ 125.94ರ ಸ್ಟ್ರೈಕ್ ರೇಟ್‌ನಲ್ಲಿ 597 ರನ್ ಗಳಿಸಿದರು.