ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ಶುಕ್ರವಾರದಿದ ಕಾನ್ಪುರದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿ ದಾಖಲೆಯ ಪುಟಕ್ಕೆ ಎಂಟ್ರಿ ನೀಡಲು ಸಿದ್ಧತೆ ನಡೆಸಿದೆ. ಹಲವು ಆಟಗಾರರಿಗೆ ಈ ಪಂದ್ಯ ಮಹತ್ವದಾಗಿದ್ದು, ದಾಖಲೆಯ ಪುಟಕ್ಕೆ ಸೇರಲು ಆಟಗಾರರು ತಯಾರಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ರೋಹಿತ್ ಶರ್ಮಾ ಸಹ ಹಿಂದೆ ಬಿದ್ದಿಲ್ಲ.
ಚೆನ್ನೈನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ 280 ರನ್‌ಗಳ ಜಯ ಸಾಧಿಸಿರುವ ಟೀಮ್ ಇಂಡಿಯಾ ಉತ್ಸಾಹದಲ್ಲಿದೆ. ಈ ಪಂದ್ಯದಲ್ಲಿ ರೆಕಾರ್ಡ್ ನಿರ್ಮಿಸೋಕೆ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಆರ್.ಅಶ್ವಿನ್ ರೆಡಿ ಆಗಿದ್ದಾರೆ. ಇದೇ ಟೆಸ್ಟ್‌ನಲ್ಲಿ ರೋಹಿತ್ ಸಹ ಟೀಮ್ ಇಂಡಿಯಾ ಹಾಲಿ ಕೋಚ್ ದಾಖಲೆ ಅಳಿಸುವ ಸನಿಹದಲ್ಲಿದ್ದಾರೆ.

ಶುಕ್ರವಾರದಿಂದ ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸಹ ದಾಖಲೆ ನಿರ್ಮಿಸಲಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ ಗೌತಮ್ ಗಂಭೀರ್ ಅವರ ದಾಖಲೆಯನ್ನು ಅಳಿಸುವ ಸನಿಹದಲ್ಲಿದ್ದಾರೆ. ರೋಹಿತ್ ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಆದರೆ ಎರಡನೇ ಟೆಸ್ಟ್‌ನಲ್ಲಿ ಅಬ್ಬರಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ರೋಹಿತ್ ಶರ್ಮಾ ಟೀಮ್ ಇಂಡಿಯಾ ಪರ 60 ಟೆಸ್ಟ್ ಪಂದ್ಯಗಳನ್ನು ಆಡಿದ್ದು 4148 ರನ್ ಸಿಡಿಸಿದ್ದಾರೆ. ಇದರಲ್ಲಿ 12 ಶತಕ ಹಾಗೂ 17 ಅರ್ಧಶತಕಗಳು ಸೇರಿವೆ. ಇನ್ನು ಟೀಮ್ ಇಂಡಿಯಾದ ಹಾಲಿ ಕೋಚ್ ಗೌತಮ್ ಗಂಭೀರ್ 58 ಟೆಸ್ಟ್ ಪಂದ್ಯಗಳಲ್ಲಿ 9 ಶತಕ ಹಾಗೂ 22 ಅರ್ಧಶತಕಗಳೊಂದಿಗೆ 4154 ರನ್ ಕಲೆ ಹಾಕಿದ್ದಾರೆ. ಹಿಟ್ ಮ್ಯಾನ್ ಕೋಚ್ ಗಂಭೀರ್ ದಾಖಲೆ ಮುರಿಯಲು ಇನ್ನು ಏಳು ರನ್ ಅವಶ್ಯಕತೆ ಇದೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಎರಡನೇ ಟೆಸ್ಟ್‌ನಲ್ಲಿ ಶತಕ ಬಾರಿಸುವಲ್ಲಿ ಸಫಲರಾದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಬಹುದು. ಸದ್ಯ ರೋಹಿತ್ ಬತ್ತಳಿಕೆಯಲ್ಲಿ 12 ಶತಕಗಳು ಇವೆ. ಕಾನ್ಪುರ್‌ನ ಗ್ರೀನ್ ಪಾರ್ಕ್ ಅಂಗಳದಲ್ಲಿ ಮೂರಂಕಿ ಮುಟ್ಟಿದರೆ, ಮುರಳಿ ವಿಜಯ್, ಅಜಿಂಕ್ಯ ರಹಾನೆ ಅವರ ದಾಖಲೆಯನ್ನು ಅಳಿಸಬಹುದು. ಈ ಇಬ್ಬರೂ ಆಟಗಾರರು ಟೆಸ್ಟ್‌ನಲ್ಲಿ 12 ಶತಕ ಬಾರಿಸಿದ ಹಿರಿಮೆಯನ್ನು ಹೊಂದಿದ್ದಾರೆ.
ಟೀಮ್ ಇಂಡಿಯಾ ನಾಯಕನಾಗಿಯೂ ರೋಹಿತ್ ಶರ್ಮಾ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ, ದಕ್ಷಿಣ ಆಫ್ರಿಕಾದ ರೆಕಾರ್ಡ್ ಮುರಿಯಲಿದೆ. ರೋಹಿತ್ ಶರ್ಮಾ ಅವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಎರಡು ಬಾರಿ ವಿಶ್ವ ಟೆಸ್ಟ್ ಚಾಪಿಯನ್ ಶಿಪ್ ಫೈನಲ್ ತಲುಪಿದ್ದು, ಹ್ಯಾಟ್ರಿಕ್ ಕನಸನ್ನು ಕಾಣುತ್ತಿದೆ.