ರೋಹಿತ್ ಶರ್ಮಾ ನಾಯಕತ್ವದಲ್ಲಿ ಅವಕಾಶ ಸಿಗುವುದು ಈ ಬೌಲರ್‌ಗಳಿಗೆ ಮಾತ್ರ ಎಂದ ಹರ್ಷಲ್ ಪಟೇಲ್

ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಸೋಲುವುದರ ಮೂಲಕ ಮುಖಭಂಗಕ್ಕೊಳಗಾಗಿರುವ ಟೀಮ್ ಇಂಡಿಯಾ ಇದೀಗ ತವರಿನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಭಾರತ ಕೆರಿಬಿಯನ್ನರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸಲು ಸಜ್ಜಾಗಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಈ ಎರಡೂ ಸರಣಿಗಳಲ್ಲಿಯೂ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ನಾಯಕನಾಗಿ ಮುನ್ನಡೆಸಲಿದ್ದಾರೆ.
ಹೌದು, ಕಳೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ಮೇಲೆ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಮೂಲಕ ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ತಂಡದ ಪೂರ್ಣಾವಧಿ ನಾಯಕನಾಗಿ ಅಧಿಕಾರ ಸ್ವೀಕರಿಸಿದ್ದರು. ಹೀಗೆ ಪೂರ್ಣಾವಧಿ ನಾಯಕನಾಗಿ ರೋಹಿತ್ ಶರ್ಮಾ ಮುನ್ನಡೆಸಿದ ಮೊದಲನೇ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ 3-0 ಅಂತರದಲ್ಲಿ ಸರಣಿಯನ್ನು ಗೆದ್ದು ಬೀಗಿತು ಹಾಗೂ ರೋಹಿತ್ ಶರ್ಮಾ ನಾಯಕನಾಗಿ ಶುಭಾರಂಭವನ್ನು ಮಾಡಿದರು. ಇದಾದ ಬೆನ್ನಲ್ಲೇ ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ವಿರಾಟ್ ಕೊಹ್ಲಿ ಹೊರಬಿದ್ದು ರೋಹಿತ್ ಶರ್ಮಾ ನೂತನ ನಾಯಕನಾಗಿ ಆಯ್ಕೆಯಾದರು. ಆದರೆ ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಇದೀಗ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಅಧಿಕಾರವನ್ನು ಸ್ವೀಕರಿಸುತ್ತಿದ್ದಾರೆ.
ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪರ್ಪಲ್ ಕ್ಯಾಪ್ ವಿಜೇತನಾಗಿ ಹೊರಹೊಮ್ಮುವ ಮೂಲಕ ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದ ಹರ್ಷಲ್ ಪಟೇಲ್ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಹಾಗೂ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲೂ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿರುವ ಹರ್ಷಲ್ ಪಟೇಲ್ ರೋಹಿತ್ ಶರ್ಮಾ ನಾಯಕತ್ವದ ಕುರಿತು ತಮ್ಮ ಅಭಿಪ್ರಾಯಗಳನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ರೋಹಿತ್ ಶರ್ಮಾ ಬೌಲಿಂಗ್ ನೀಡುವುದು ಈ ಬೌಲರ್‌ಗಳಿಗೆ ಮಾತ್ರ
ರೋಹಿತ್ ಶರ್ಮಾ ಓರ್ವ ಬೌಲರ್‌ನಲ್ಲಿ ನಂಬಿಕೆಯನ್ನು ಹೊಂದಿದ್ದರೆ ಮಾತ್ರ ಬೌಲಿಂಗ್ ಮಾಡುವ ಅವಕಾಶವನ್ನು ನೀಡುತ್ತಾರೆ ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ. ರೋಹಿತ್ ಶರ್ಮಾಗೆ ಬೌಲರ್ ಮೇಲೆ ನಂಬಿಕೆ ಇದ್ದರೆ ಯಾವುದೇ ಸಲಹೆ ನೀಡುವುದಿಲ್ಲ, ಬದಲಾಗಿ 'ನಿನಗೆ ಏನು ಮಾಡಬೇಕು ಎಂಬುದು ತಿಳಿದಿದೆ, ಅದನ್ನೇ ಮಾಡು' ಎಂದು ಸ್ವಾತಂತ್ರ್ಯವನ್ನು ನೀಡುತ್ತಾರೆ ಎಂದು ಹರ್ಷಲ್ ಪಟೇಲ್ ರೋಹಿತ್ ಶರ್ಮಾ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ.

ಇಂತಹ ನಾಯಕರ ಅಡಿಯಲ್ಲಿ ಬೌಲಿಂಗ್ ಮಾಡಲು ಖುಷಿಯಾಗುತ್ತದೆ
ಇನ್ನೂ ಮುಂದುವರಿದು ಮಾತನಾಡಿರುವ ಹರ್ಷಲ್ ಪಟೇಲ್ ಈ ರೀತಿ ಬೌಲರ್‌ಗಳಿಗೆ ತಮ್ಮ ಯೋಜನೆಯ ಪ್ರಕಾರ ಬೌಲಿಂಗ್ ಮಾಡುವಂತಹ ಸ್ವಾತಂತ್ರ್ಯ ನೀಡುವ ನಾಯಕರ ನಾಯಕತ್ವದಡಿಯಲ್ಲಿ ಆಟವನ್ನು ಆಡಲು ಖುಷಿಯಾಗುತ್ತದೆ ಎಂದಿದ್ದಾರೆ.

ನ್ಯೂಜಿಲೆಂಡ್ ಸರಣಿಯಲ್ಲಿ 4 ವಿಕೆಟ್ ಪಡೆದಿದ್ದ ಹರ್ಷಲ್
ಇನ್ನು ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹರ್ಷಲ್ ಪಟೇಲ್ 2 ಪಂದ್ಯಗಳಲ್ಲಿ ಕಣಕ್ಕಿಳಿದು 4 ವಿಕೆಟ್ ಪಡೆದಿದ್ದರು. ಹೀಗೆ ಚೊಚ್ಚಲ ಸರಣಿಯಲ್ಲಿಯೇ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಹುಟ್ಟು ಹಾಕಿರುವ ಹರ್ಷಲ್ ಪಟೇಲ್ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಮತ್ತಷ್ಟು ವಿಕೆಟ್ ಪಡೆದು ಮಿಂಚುವ ನಿರೀಕ್ಷೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications