2024ರ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ತಮ್ಮ ರಾಜ್ಯ ತಂಡಗಳಿಗೆ ಆಡಲು ವಿಫಲರಾದ ನಂತರ, ಭಾರತ ತಂಡದ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಬಿಸಿಸಿಐ ತನ್ನ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಹೊರಗಿಟ್ಟಿದೆ.
ಭಾರತ ತಂಡದಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಗ್ರೇಡ್ ಬಿ ಒಪ್ಪಂದದ ಭಾಗವಾಗಿದ್ದರು ಮತ್ತು ಇಶಾನ್ ಕಿಶನ್ ಕಳೆದ ಋತುವಿನಲ್ಲಿ ಗ್ರೇಡ್ ಸಿ ಪಟ್ಟಿಯಲ್ಲಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತಹ ಫ್ರಾಂಚೈಸ್ ಆಧಾರಿತ ಲೀಗ್ ಪಂದ್ಯಾವಳಿಗಳಿಗಿಂತ, ಪ್ರಥಮ ದರ್ಜೆ ಕ್ರಿಕೆಟ್‌ಗೆ ಆದ್ಯತೆ ನೀಡುವಂತೆ ಕ್ರಿಕೆಟಿಗರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ದೇಶನವನ್ನು ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಬೆಂಬಲಿಸಿದ್ದಾರೆ.
ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರವನ್ನು ಬೆಂಬಲಿಸಿರುವ ಕೀರ್ತಿ ಆಜಾದ್, ಅನುಭವಿ ಹಾಗೂ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜರು ರಣಜಿ ಟ್ರೋಫಿ ಪಂದ್ಯಗಳಲ್ಲೂ ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

2021ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ವಿರಾಟ್ ಕೊಹ್ಲಿ ಕೇವಲ ಒಂದು ರಣಜಿ ಪಂದ್ಯವನ್ನು ಆಡಿದ್ದರೆ, ರೋಹಿತ್ ಶರ್ಮಾ ಕೊನೆಯದಾಗಿ 2015ರಲ್ಲಿ ರಣಜಿ ಕ್ರಿಕೆಟ್ ಆಡಿದ್ದರು.
"ಬಿಸಿಸಿಐನ ಈ ನಿರ್ದೇಶನ ಬಹಳ ಒಳ್ಳೆಯ ಕ್ರಮವಾಗಿದೆ. ಪ್ರತಿಯೊಬ್ಬರೂ ರಣಜಿ ಟ್ರೋಫಿ ಕ್ರಿಕೆಟ್ ಆಡಬೇಕು, ಆದರೆ ಪ್ರಸ್ತುತ ಐಪಿಎಲ್‌ಗೆ ಒತ್ತು ನೀಡಲಾಗುತ್ತದೆ. ಅದು ಒಳ್ಳೆಯದು, ಏಕೆಂದರೆ ಇದು ಮನರಂಜನೆಯಾಗಿದೆ. ಆದರೆ ನಿಜವಾದ ಕ್ರಿಕೆಟ್ ಐದು ದಿನಗಳ ಆಟದ್ದಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಆಡುವುದು ಒಳ್ಳೆಯದು, ಅದು ನಿಮ್ಮನ್ನು ಸಂಪರ್ಕದಲ್ಲಿರಿಸುತ್ತದೆ".

"ಅಲ್ಲದೆ, ನೀವು ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿಯಾಗಿದ್ದರೂ ಸಹ, ನೀವು ಬಿಡುವಿರುವಾಗ ಹಿಂತಿರುಗಿ ಮತ್ತು ತಮ್ಮ ರಾಜ್ಯಕ್ಕಾಗಿ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು," ಎಂದು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ತಿಳಿಸಿದರು.
"ರಾಜ್ಯ ತಂಡ ನಿಮಗೆ ಆಯ್ಕೆಯಾಗಲು, ಆಟಗಾರನಾಗಲು ಮತ್ತು ನಂತರ ದೇಶಕ್ಕಾಗಿ ಆಡಲು ಅವಕಾಶವನ್ನು ನೀಡಿತು. ಕೇವಲ ಇಬ್ಬರಿಗೆ ದಂಡ ವಿಧಿಸುವುದು ಸರಿಯಲ್ಲ, ಎಲ್ಲರಿಗೂ ದಂಡ ವಿಧಿಸಬೇಕು ಎಂದು ನಾನು ಭಾವಿಸುತ್ತೇನೆ. ಎಲ್ಲರನ್ನೂ ಒಂದೇ ಕನ್ನಡಿಯಿಂದ ನೋಡಬೇಕು," ಎಂದರು.
ಹಿರಿಯ ಟೆಸ್ಟ್ ತಂಡದ ಆಟಗಾರರು ತಮ್ಮ ತಂಡಗಳಿಗೆ ಆಡುತ್ತಿದ್ದರು: ಕೀರ್ತಿ ಆಜಾದ್
ಇದೇ ವೇಳೆ ಕೀರ್ತಿ ಆಜಾದ್ ತಾವು ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವಾಗ ಪ್ರಥಮ ದರ್ಜೆ ಕ್ರಿಕೆಟ್ ಪರಿಸ್ಥಿತಿ ಹೇಗಿತ್ತು ಎಂಬುದರ ಕುರಿತು ಮಾತನಾಡಿದರು. ಸುನಿಲ್ ಗವಾಸ್ಕರ್, ಬಿಷನ್ ಸಿಂಗ್ ಬೇಡಿ ಅವರಂತಹ ಆಟಗಾರರು ನನ್ನ ಮತ್ತು ರವಿಶಾಸ್ತ್ರಿ ಅವರೊಂದಿಗೆ ದೇಶೀಯ ರೆಡ್-ಬಾಲ್ ಕ್ರಿಕೆಟ್ ಆಡಿದ್ದಾರೆ ಎಂದು ಹೇಳಿದರು.
"ನಾವು ನಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ದಿನಗಳಲ್ಲಿ ಬಿಷನ್ ಸಿಂಗ್ ಬೇಡಿ, ಮದನ್ ಲಾಲ್, ಸುರೀಂದರ್ ಅಮರನಾಥ್, ಮೊಹಿಂದರ್ ಅಮರನಾಥ್, ಚೇತನ್ ಚೌಹಾಣ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ಕರ್ಸನ್ ಘವ್ರಿ ಅವರಂತಹ ಆಟಗಾರರು ನನ್ನ ಮತ್ತು ರವಿಶಾಸ್ತ್ರಿ ಅವರಂತಹ ಯುವ ಆಟಗಾರರೊಂದಿಗೆ ಆಡಿದ್ದರು".
"ಈ ಎಲ್ಲಾ ಹಿರಿಯ ಟೆಸ್ಟ್ ತಂಡದ ಆಟಗಾರರು ತಮ್ಮ ತಂಡದ ಪರವಾಗಿ ಆಡುತ್ತಿದ್ದರು, ತಮ್ಮ ರಾಜ್ಯದ ಹೆಮ್ಮೆಗಾಗಿ ಆಡಿದರು. ಅದು ಇಂದಿನ ಯುವ ಆಟಗಾರರಲ್ಲಿ ಕಾಣೆಯಾಗಿದೆ," ಎಂದು ಕೀರ್ತಿ ಆಜಾದ್ ತಿಳಿಸಿದರು.