ಆಗಸ್ಟ್ 18 ಭಾನುವಾರ, ಕಳೆದ ವರ್ಷಗಳಿಂದ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ನನ್ನು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಹೋಲಿಸಲಾಗುತ್ತಿದೆ. ಆದರೆ ಕೊಹ್ಲಿಗೆ ಬಾಬರ್ ಸರಿಸಾಟಿಯಲ್ಲ. ಇದರ ಹೊರತಾಗಿಯೂ ಬಾಬರ್ ಹೆಸರಿನಲ್ಲಿ ಹಲವು ದಾಖಲೆಗಳು ದಾಖಲಾಗಿವೆ.
ಇದೀಗ ಬಾಬರ್ ಸ್ಪರ್ಧೆ ಇರುವುದು ಕೊಹ್ಲಿಯೊಂದಿಗೆ ಅಲ್ಲ, ಟೀಮ್ ಇಂಡಿತಾ ನಾಯಕ ರೋಹಿತ್ ಶರ್ಮಾ ಜೊತೆ ಎಂಬುದು ಅಚ್ಚರಿ ಮೂಡಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬೃಹತ್ ದಾಖಲೆಯೊಂದನ್ನು ಸೃಷ್ಟಿಸಲು ಬಾಬರ್ ಮತ್ತು ರೋಹಿತ್ ನಡುವೆ ಪೈಪೋಟಿ ಏರ್ಪಟ್ಟಿದೆ.

ಆಗಸ್ಟ್ 21 ರಿಂದ ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರಿಗಿಂತ ಮೊದಲು ದಾಖಲೆ ಸಾಧಿಸುವ ಸುವರ್ಣಾವಕಾಶ ಬಾಬರ್ ಅಜಮ್ ಅವರಿಗಿದೆ.
ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪೈಕಿ ಬಾಬರ್ 6ನೇ ಸ್ಥಾನದಲ್ಲಿದ್ದಾರೆ. ಇಲ್ಲಿಯವರೆಗೆ ಅವರು 8 ಶತಕ ಮತ್ತು 15 ಅರ್ಧ ಶತಕಗಳೊಂದಿಗೆ 2661 ರನ್ ಗಳಿಸಿದ್ದಾರೆ. ಇದೀಗ 3000 ರನ್ ಗಳಿಸಲು ಬಾಬರ್‌ಗೆ 339 ರನ್ ಅಗತ್ಯವಿದೆ.
ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಬರ್ 3 ಸಾವಿರ ರನ್ ಗಳಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಈ ದಾಖಲೆ ಮಾಡುವ ರೇಸ್‌ನಲ್ಲಿ ರೋಹಿತ್ ಶರ್ಮಾ ಬಾಬರ್‌ಗಿಂತ ಹಿಂದೆ ಬಿದ್ದಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಹಿಟ್‌ಮ್ಯಾನ್ 8ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಇದುವರೆಗೆ 9 ಶತಕ ಮತ್ತು 8 ಅರ್ಧಶತಕಗಳ ನೆರವಿನಿಂದ 2552 ರನ್ ಗಳಿಸಿದ್ದಾರೆ.
ರೋಹಿತ್‌ಗೆ 3000ರ ಗಡಿ ತಲುಪಲು 448 ರನ್‌ಗಳ ಅಗತ್ಯವಿದೆ. ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿ ಆಡಲು ಟೀಮ್ ಇಂಡಿಯಾ ಸಜ್ಜಾಗಿದೆ. ಒಂದು ವೇಳೆ ಬಾಬರ್ ಮೂರು ಸಾವಿರದ ಗಡಿ ದಾಟಲು ವಿಫಲವಾದರೆ, ರೋಹಿತ್ ಶರ್ಮಾ ಏಷ್ಯಾದ ನಂಬರ್-1 ಬ್ಯಾಟರ್ ಆಗಲು ಸ್ವಲ್ಪ ಪರಿಶ್ರಮಪಡಬೇಕಾಗುತ್ತದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬಾಬರ್ ಅವರಿಗಿಂತ ರೋಹಿತ್ ಫಾರ್ಮ್ ಉತ್ತಮವಾಗಿದೆ. ಬಾಬರ್ ಕಳೆದ ಒಂದೂವರೆ ವರ್ಷಗಳಿಂದ ಒಂದೂ ಅರ್ಧಶತಕ ಗಳಿಸಿಲ್ಲ. ಕೊನೆಯದಾಗಿ ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಅಂದಿನಿಂದ ಬಾಬರ್ ಬ್ಯಾಟ್‌ನಿಂದ ಒಂದೇ ಒಂದು ಅರ್ಧಶತಕ ಬಂದಿಲ್ಲ.
ಆದರೆ, ರೋಹಿತ್ ಶರ್ಮಾ ಫಾರ್ಮ್ ಬಗ್ಗೆ ನೋಡುವುದಾದರೆ, ಅವರು ಟೆಸ್ಟ್‌ನಲ್ಲಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಟ್‌ಮ್ಯಾನ್ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸಿದ್ದರು. ಹೀಗಾಗಿ ರೋಹಿತ್ ಫಾರ್ಮ್ ಉತ್ತಮವಾಗಿದ್ದು, ದಾಖಲೆ ಸೃಷ್ಟಿಸುವ ರೇಸ್‌ನಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.