ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ವಿರುದ್ಧದ 3 ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಗುರುವಾರ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಸೇರಿದರು. ಈ ಮೂಲಕ ದಾಖಲೆಯ ಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ರೋಹಿತ್ 2 ಎಸೆತಗಳನ್ನು ಎದುರಿಸಿದರು ಮತ್ತು ದುರದೃಷ್ಟವಶಾತ್ ರನೌಟ್ ಆದರು. 6 ವರ್ಷಗಳ ನಂತರ ಈ ಮಾದರಿಯಲ್ಲಿ ರೋಹಿತ್ ರನೌಟ್ ಆಗಿದ್ದಾರೆ.ಇದಲ್ಲದೆ, ಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಖಾತೆ ತೆರೆಯದೆ ಔಟಾದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಬೇಡವಾದ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಅವರು 11 ಬಾರಿ ಚುಟುಕು ಕ್ರಿಕೆಟ್‌ನಲ್ಲಿ ಸೊನ್ನೆ ಸುತ್ತಿದ್ದಾರೆ.

ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಖಾತೆ ತೆರೆಯದೆ ಔಟಾದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. ರಾಹುಲ್ 5 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ವಾಷಿಂಗ್ಟನ್ ಸುಂದರ್ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಮಾದರಿಯಲ್ಲಿ ಈ ಮೂರು ಭಾರತೀಯ ಬ್ಯಾಟ್ಸ್‌ಮನ್‌ಗಳು ಖಾತೆಯನ್ನು ತೆರೆಯುವ ಮುನ್ನವೇ 4 ಬಾರಿ ಗ್ಲೌಸ್ ಬಿಚ್ಚಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಬಾರಿ ಖಾತೆ ತೆರೆಯದೆ ಔಟಾದ ಬ್ಯಾಟ್ಸ್‌ಮನ್ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ (13).
ರೋಹಿತ್ ಸುದೀರ್ಘ ಸಮಯದ ನಂತರ ಟಿ-20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಮರಳಿದ್ದಾರೆ. ಅವರು ನವೆಂಬರ್ 10, 2022 ರಂದು ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ T20 ಆಡಿದರು. ಹೀಗಿರುವಾಗ ಟಾಸ್‌ಗಾಗಿ ಮೈದಾನಕ್ಕಿಳಿದ ಅವರು ಮತ್ತೊಂದು ಬೇಡದ ದಾಖಲೆಯನ್ನೂ ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ.

T-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಭಾರತದ ಅತ್ಯಂತ ಹಿರಿಯ ನಾಯಕ (36 ವರ್ಷ 256 ದಿನಗಳು) ಎನಿಸಿಕೊಂಡಿದ್ದಾರೆ. ಈ ಮೊದಲು ಈ ಸಾಧನೆ ಶಿಖರ್ ಧವನ್ (35 ವರ್ಷ 236 ದಿನ) ಹೆಸರಿನಲ್ಲಿತ್ತು.ರೋಹಿತ್ ಅಂತಾರಾಷ್ಟ್ರೀಯ ಟಿ-20ಯಲ್ಲಿ 3,853 ರನ್ ಗಳಿಸಿದ್ದಾರೆ.