ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ 9 ನೇ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 36 ರನ್‌ಗಳಿಂದ ಗೆದ್ದು ಬೀಗಿತು. ಮುಂಬೈ ಇಂಡಿಯನ್ಸ್ ಸೋತರೂ, ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಶನಿವಾರ ಇತಿಹಾಸ ನಿರ್ಮಿಸಿದ್ದಾರೆ.
ರೋಹಿತ್ ಶರ್ಮಾ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರ ಎಂದು ಸಾಬೀತುಪಡಿಸಿದ್ದಾರೆ. ಮುಂಬೈ ತಂಡದ ಪ್ಲೇಯಿಂಗ್- 11 ರಲ್ಲಿ ಅವರ ಹೆಸರು ಸೇರ್ಪಡೆಯಾದ ತಕ್ಷಣ ದಾಖಲೆ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ರೋಹಿತ್ ಅವರು ತಮ್ಮ 450 ನೇ ಟಿ20 ಪಂದ್ಯವನ್ನು ಆಡಿದರು. ಇದರೊಂದಿಗೆ, ಅವರು 450 ಟಿ20 ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ ದಾಖಲೆ ಹೊಂದಿದ್ದಾರೆ. 2007 ರಿಂದ ಟಿ20 ಕ್ರಿಕೆಟ್ ಆಡುತ್ತಿರುವ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಮಾಡಿದ್ದಾರೆ. ತಮ್ಮ ನಾಯಕತ್ವದಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಈ ಐತಿಹಾಸಿಕ ಗೆಲುವಿನ ಬಳಿಕ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು.
ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಮೊದಲು ಡೆಕ್ಕನ್ ಚಾರ್ಜರ್ಸ್ ಪರ ಕಾಣಿಸಿಕೊಂಡಿದ್ದು, ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ. ಭಾರತ ಟಿ20 ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 29.58 ಸರಾಸರಿ ಮತ್ತು 131.03 ಸ್ಟ್ರೈಕ್ ರೇಟ್‌ನಲ್ಲಿ 6628 ರನ್ ಗಳಿಸಿದ್ದಾರೆ. ಅವರು 8.01 ರ ಎಕಾನಮಿಯೊಂದಿಗೆ 15 ವಿಕೆಟ್‌ಗಳನ್ನು ಸಹಾ ಪಡೆದಿದ್ದಾರೆ.
ರೋಹಿತ್ ಶರ್ಮಾ ಭಾರತ ತಂಡದ ಪರ 450 ಟಿ20 ಪಂದ್ಯಗಳನ್ನು ಆಡಿರುವ ದಾಖಲೆ ಮಾತ್ರವಲ್ಲದೆ, ಮತ್ತೊಂದು ಸಾಧನೆಯನ್ನು ಮಾಡಿದರು. ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 600 ಬೌಂಡರಿಗಳನ್ನು ಪೂರ್ಣಗೊಳಿಸಿದ್ದಾರೆ. ಈ ದಾಖಲೆ ಮಾಡಿದ ನಾಲ್ಕನೇ ಆಟಗಾರರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ದಾರೆ. ಈಗ ರೋಹಿತ್ ಶರ್ಮಾ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.